ಪುನರ್ವಸತಿಗಾಗಿ 617 ಅರ್ಜಿಗಳು ಬಂದಿವೆ: ರಾಮಚಂದ್ರ ಭಟ್
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಸರ್ಕಾರದಿಂದ 68 ಕುಟುಂಬಗಳಿಗೆ, ವೈಲ್ಡ್ಲೈಫ್ ಕನ್ಸರ್ವೇಶನ್ ಸೊಸೈಟಿ ವತಿಯಿಂದ 62 ಕುಟುಂಬಗಳ ಪುನರ್ವಸತಿ ಒದಗಿಸಲಾಗಿದೆ. ಸುಮಾರು 617 ಅರ್ಜಿಗಳು ಪುನರ್ವಸತಿಗಾಗಿ ಬಂದಿವೆ ಎಂದು ನಕ್ಸಲ್ ದಾಳಿಗೊಳಗಾದ ಕುತ್ಲೂರು ಕುಕ್ಕಾಜೆ ನಿವಾಸಿ ರಾಮಚಂದ್ರ ಭಟ್ ತಿಳಿಸಿದ್ದಾರೆ.
ಅವರು ಸೋಮವಾರ ಕುತ್ಲೂರಿನ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುನರ್ವಸತಿ ಗೊಂಡವರಿಂದ ತಾನು ಯಾವುದೇ ರೀತಿಯ ಲಂಚ ಪಡೆದಿಲ್ಲ. ಎನ್ಜಿಒ ನೆರವಿನೊಂದಿಗೆ ಸೇವಾ ಮನೋಭಾವನೆಯಿಂದ ಈ ಕೆಲಸ ಮಾಡಿದ್ದೇನೆ. ಯಾರನ್ನೂ ಅರಣ್ಯದಿಂದ ಹೊರಹೋಗುವಂತೆ ಒತ್ತಡ ಹೇರಿಲ್ಲ. ಸ್ವ ಇಚ್ಚೆಯಿಂದ ಹೊರ ಹೋಗುವವರಿಗೆ ನೆರವಾಗಿದ್ದೇನೆ ಅಷ್ಟೆ. ನನ್ನ ಮೇಲೆ ಯಾಕೆ ಇಂತಹ ದಾಳಿ ನಡೆಯಿತು ಎಂಬುದು ನನಗೆ ಗೊತ್ತಿಲ್ಲ. ಇಲ್ಲಿ ಹಾಕಿದ್ದ ಕರಪತ್ರಗಳಲ್ಲಿ ನನ್ನನ್ನು ದಲ್ಲಾಳಿ ಎಂದು ಬಿಂಬಿಸಲಾಗಿತ್ತು. ಆದರೆ, ನಾನು ಏನು ಕೆಲಸ ಮಾಡಿದ್ದೇನೆ ಎಂಬುದಕ್ಕೆ ಪುನರ್ವಸತಿಗೊಂಡ ಜನರೇ ಸಾಕ್ಷಿಯಾಗಿದ್ದಾರೆ ಎಂದು ವಿವರಿಸಿದರು.
ದ.ಕ. ಜಿಲ್ಲೆಯ 93 ಕುಟುಂಬಗಳು, ಉಡುಪಿಯಲ್ಲಿ 12 ಕುಟುಂಬಗಳು ಹಾಗೂ ಚಿಕಮಗಳೂರಿನಲ್ಲಿ 25 ಕುಟುಂಬಗಳು ಅರಣ್ಯದಿಂದ ಹೊರಬಂದಿದ್ದಾರೆ. ಈ ಕುಟುಂಬಗಳಿಗೆ ಸ್ವಯಂ ಸೇವಾ ಸಂಸ್ಥೆಯವರು ನೇರವಾಗಿ ಹಣ ಪಾವತಿ ಮಾಡಿ ಇವರ ಜಮೀನನ್ನು ಖರೀದಿಸಿದೆ. ಜನರ ಬೇಡಿಕೆಗಳಿಗೆ ಅನಗುಣವಾಗಿ ಅವರಿಗೆ ಹಣ ಪಾವತಿಸಲಾಗಿದೆ. ಇದಕ್ಕೆ ಬಂದಿರುವ ಅನುದಾನ ಎಲ್ಲಿಂದ ಎಂಬುದು ನನಗೆ ತಿಳಿದಿಲ್ಲ. ಜನರ ಕೆಲಸ ಮಾಡಲು ಸಂಸ್ಥೆಯವರೇ ನನಗೆ ವೇತನ, ಖರ್ಚು ಕೊಡುತ್ತಿದ್ದಾರೆ. ಮೂಲ ನಿವಾಸಿಗಳಿಗೆ ಉತ್ತಮ ಸೌಕರ್ಯ ಕಲ್ಪಿಸುವುದೇ ಸಂಸ್ಥೆಯ ಉದ್ದೇಶವಾಗಿದೆ. ಈ ಕಾರ್ಯವನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗುತ್ತೇನೆ. ಈಗ ನಡೆದಿರುವ ದಾಳಿಯಿಂದ ಭಯದ ವಾತಾವರಣ ನಿರ್ಮಾಣವಾಗಿದ್ದು, ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.