ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಸುಳ್ಯ: ಅಜ್ಜಾವರ ಗ್ರಾಮದ ಉದ್ದಂತಡ್ಕ ವೆಂಕಟ್ರಮಣ ಗೌಡರು (58) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿದೆ. ರಬ್ಬರ್ ತೋಟಕ್ಕೆಂದು ಹೋದವರು ಅಲ್ಲಿ ವಿಷ ಸೇವಿಸಿದ್ದಾರೆ. ತೋಟಕ್ಕೆ ಹೋದವರು ಬಂದಿಲ್ಲವೆಂದು ಮನೆಯವರು ತೋಟಕ್ಕೆ ಹೋದಾಗ ಅವರು ಮೃತಪಟ್ಟಿದ್ದರು. ಅವರಿಗೆ ಅಮಲು ಸೇವಿಸುವ ಚಟವಿದ್ದು ಇದರಿಂದಲೇ ಅವರು ವಿಷ ಸೇವಿಸಿರುವುದಾಗಿ ಅವರ ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನದಿಯಲ್ಲಿ ಮುಳುಗಿ ಯುವಕ ಸಾವು
ಉಡುಪಿ: ನದಿಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿ ನೀರಿನ ಸೆಳೆತಕ್ಕೆ ಸಿಲುಕಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಮಾಣೈ ಬ್ರಿಡ್ಜ್ ಬಳಿ ನಡೆದಿದೆ. ಫಣೀಂದ್ರ (23) ಮೃತರು. ಇವರು ಭಾನುವಾರ ಮಧ್ಯಾಹ್ನ ಬೊಮ್ಮರಬೆಟ್ಟು ಗ್ರಾಮದ ಮಾಣೈ ಬ್ರಿಡ್ಜ್ ಕೆಳಗೆ ಹರಿಯುತ್ತಿರುವ ಸ್ವರ್ಣಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ನೀರಿನ ಸೆಳೆತಕ್ಕೆ ಸಿಲುಕಿ, ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ರವೀಂದ್ರ ರೆಡ್ಡಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಸ್ ಡಿಕ್ಕಿ; ಸವಾರರಿಗೆ ಗಾಯ
ಕಾರ್ಕಳ: ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಸಹಸವಾರ ಗಾಯಗೊಂಡ ಘಟನೆ ಇಲ್ಲಿನ ಮಾಳ ಮುಳ್ಳೂರು ಘಾಟ್ ಬಳಿ ಶನಿವಾರ ನಡೆದಿದೆ. ಗಾಯಗೊಂಡವರನ್ನು ಶೀಶರ ಎಸ್. ಕುಮಾರ್ ಹಾಗೂ ಅನುಶಾ ಎಂದು ಗುರುತಿಸಲಾಗಿದೆ. ಶೀಶರ ಅವರು ಬೈಕಿನಲ್ಲಿ ಅನುಶಾ ಅವರನ್ನು ಕುಳ್ಳಿರಿಸಿಕೊಂಡು ಕಾರ್ಕಳ ಕಡೆಗೆ ಹೋಗುತ್ತಿರುವಾಗ ಮಾಳ ಮುಳ್ಳೂರು ಘಾಟಿನಲ್ಲಿ ಎದುಗಡೆಯಿಂದ ಬಂದ ಬಸ್ ಡಿಕ್ಕಿ ಹೊಡೆಯಿತು. ಬಸ್ಸಿನ ಚಾಲಕ ರಾಜೇಶ್ ಎಂಬವರು ಬಸ್ನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದಿರುವುದೇ ಈ ಅಪಘಾತಕ್ಕೆ ಕಾರಣ ಎಂಬುದಾಗಿ ಶೀಶರ ಎಸ್. ಕುಮಾರ್ ನೀಡಿದ ದೂರಿನಂತೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.