ಶೋಷಣೆ ಮುಕ್ತಾಯ ತನಕ ಹೋರಾಟ: ನೀಲಾ
ಬೆಳ್ತಂಗಡಿ: ಶೋಷಣೆ ಮುಕ್ತಾಯವಾಗುವವರೆಗೆ ಹೋರಾಟ ನಿರಂತರವಾಗಲಿದೆ. ಅತ್ಯಾಚಾರ ಅನಾಚಾರಗಳನ್ನು ಕಿತ್ತುಹಾಕಲು ಎಲ್ಲರೂ ಒಟ್ಟಾಗಿ ಮುನ್ನುಗ್ಗಬೇಕಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಕರೆ ನೀಡಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ನೇತೃತ್ವದಲ್ಲಿ, ಅತಿಕ್ರಮಿತ ದಲಿತರ ಮೀಸಲು ಭೂಮಿಯನ್ನು ದಲಿತರಿಗೆ ಹಂಚಬೇಕು. ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ ಜೊತೆಗೆ ಇತರ ಎಲ್ಲ ಕೊಲೆ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸೋಮವಾರ ಬೆಳ್ತಂಗಡಿ ತಾಲೂಕು ಕಚೇರಿಯ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲದರಲ್ಲೂ ಹೋರಾಟ ನಡೆಸುವ, ಮಹಿಳೆಯರ ಮೇಲೆ ಕೈ ಮಾಡುವ ಸಂಘ ಪರಿವಾರದ ಸಂಘಟನೆಗಳು ಸೌಜನ್ಯಾಳ ಪ್ರಕರಣದಲ್ಲಿ ಸೊಲ್ಲೆತ್ತದಿರುವುದು ನಾಚಿಕೆಗೇಡು. ಖಾಕಿ ತೊಟ್ಟ ಪೊಲೀಸರೇ ನೈತಿಕ ಪೊಲೀಸರಿಗೆ ಗುತ್ತಿಗೆ ನೀಡಿದ್ದೀರಾ. ಸೌಜನ್ಯಾ, ವೇದವಲ್ಲಿ, ಪದ್ಮಲತಾ ಹಾಗೂ ಇತರೇ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಸಮರ್ಪಕ ತನಿಖೆ ನಡೆಯಬೇಕು. ತಪ್ಪು ಮಾಡಿಲ್ಲವೆಂದಾದರೆ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಬಿಐಯ ಮೂಲಕವಾಗಿಯೇ ನಡೆಸಲಿ ಆಗ ಸತ್ಯ ಹೊರಬರಲಿದೆ ಎಂದರು.
ಹೋರಾಟದ ಮುಂದೆ ಏನೂ ಇಲ್ಲ: ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಜನರ ಹೋರಾಟಗಳ ಮುಂದೆ ಯಾವ ಸಾಮ್ರಾಜ್ಯಗಳೂ ಉಳಿದುಕೊಂಡಿಲ್ಲ. ದಲಿತರ ಭೂಮಿ ಕಸಿಯುವುದು, ಅತ್ಯಾಚಾರಿಗಳಿಗೆ ಬೆಂಬಲ ನೀಡುವುದು. ಬಡವನ ದುಡಿಮೆಯನ್ನು ಕಸಿದುಕೊಳ್ಳುವುದು ಯಾವ ಧರ್ಮ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ, ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, ಸೌಜನ್ಯಾ ಹೋರಾಟದ ಪ್ರತೀಕವಾಗಿದ್ದಾಳೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುವವರಿಗೆ ಕಡಿವಾಣ ಹಾಕುತ್ತೇವೆ. ಸುಪ್ರಿಂ ಕೋರ್ಟ್ನ ಸುಪರ್ದಿಯಲ್ಲಿ ಎಲ್ಲ ಪ್ರಕರಣಗಳ ತನಿಖೆ ನಡೆಯಲಿ. ಅದರೊಂದಿಗೆ ಸಾಕ್ಷಿಗಳಾದ ರವಿ ಪೂಜಾರಿ, ವಾರಿಜ ಆಚಾರ್ತಿಯ ಸಾವಿನ ತನಿಖೆಯ ನಡೆಯಬೇಕು ಎಂದರು.
ಸಾಕ್ಷಿ ನಾಶ ಆರೋಪ: ಜೈ ಕನ್ನಡಮ್ಮ ವಾರಪತ್ರಿಕೆಯ ಸಂಪಾದಕ ದೇವಿಪ್ರಸಾದ್ ಮಾತನಾಡಿ, ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂದರ್ಭ ಸಾಕ್ಷಿಗಳನ್ನು ಗಟ್ಟಿಪಡಿಸುವ ನಿಟ್ಟಿನಲ್ಲಿ ವಿಡಿಯೋ ಚಿತ್ರೀಕರಣಗಳನ್ನು ಮಾಡಬೇಕಾಗಿದ್ದ ಪೊಲೀಸರು ಇದನ್ನು ಮಾಡದೆ ಸಾಕ್ಷಿಯೇ ನಾಶ ಮಾಡುವಲ್ಲಿ ಸಫಲರಾಗಿದ್ದಾರೆ ಎಂದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ರೋಹಿತಾಕ್ಷ ಕೆ., ರಾಜ್ಯ ಸಮಿತಿ ಸದಸ್ಯ ಸುಂದರ ಮಾಸ್ತರ್, ತಾಲೂಕು ಸಂಚಾಲಕ ಶ್ರೀಧರ ಎಸ್., ದಲಿತ ಮಹಿಳಾ ಒಕ್ಕೂಟ ತಾಲೂಕು ಸಂಚಾಲಕಿ ಸರಸ್ವತಿ, ಬೆಂಗಳೂರು ಗ್ರಾಮೀಣ ಸಂಚಾಲಕ ಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ಸಂಜೀವ ಆರ್., ಆನಂದ, ಸೌಜನ್ಯಾಳ ಹೆತ್ತವರಾದ ಚಂದಪ್ಪ ಗೌಡ, ಕುಸುಮಾವತಿ, ಮಾವ ವಿಠಲ ಗೌಡ, ಸಿಐಟಿಯು ಜಿಲ್ಲಾ ಮುಖಂಡ ಬಿ.ಎಂ. ಭಟ್ ಇದ್ದರು.
ತಾಲೂಕು ವಿದ್ಯಾರ್ಥಿ ಸಂಘಟನಾ ಕಾರ್ಯದರ್ಶಿ ಸುಕೇಶ್ ಮಾಲಾಡಿ ಸ್ವಾಗತಿಸಿದರು. ತಾಲೂಕು ಸಂಘಟನಾ ಸಂಚಾಲಕ ರಮೇಶ್ ಆರ್. ಕಾರ್ಯಕ್ರಮ ನಿರ್ವಹಿಸಿ, ನೇಮಿರಾಜ್ ಕಲ್ಲೂರು ವಂದಿಸಿದರು.
ಪ್ರತಿಭಟನಾಕಾರರು ಬೆಳ್ತಂಗಡಿಯ ಸಂತೆಕಟ್ಟೆಯಿಂದ ತಾಲೂಕು ಕಚೇರಿಯ ಮೈದಾನದವರೆಗೆ ಮೆರವಣಿಗೆ ಮೂಲಕ ಸಾಗಿ ಬಂದರು.