ಕುತ್ಲೂರು: ಕಾರು, ಬೈಕ್ಗೆ ಬೆಂಕಿ ಹಚ್ಚಿದ ಪ್ರಕರಣ- ಸಮಗ್ರ ತನಿಖೆಗೆ ಒತ್ತಾಯ
ಬೆಳ್ತಂಗಡಿ: ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ರಾಮಚಂದ್ರ ಭಟ್ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ಗೆ ಬೆಂಕಿ ಹಚ್ಚಿದ ಪ್ರಕರಣವು ಜನತೆಯಲ್ಲಿ ಸಂಶಯವನ್ನುಂಟು ಮಾಡಿದ್ದು, ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯನ್ನು ಮಾಡಬೇಕು ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ಆಗ್ರಹಿಸಿದೆ.
ಗುರುವಾಯನಕೆರೆ- ಕಾರ್ಕಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಇರುವ ರಾಮಚಂದ್ರ ಭಟ್ಟರ ಮನೆಯಲ್ಲಿ ಈ ರೀತಿ ಘಟನೆ ಆಗಿರುವುದು ಮತ್ತು ರಾಮಚಂದ್ರ ಭಟ್ಟರ ಹೇಳಿಕೆಗಳು ಸಂಶಯವನ್ನು ಮೂಡಿಸಿದೆ.
ಅವರು ಹಲವಾರು ವರ್ಷಗಳಿಂದ ವಿದೇಶಿ ಅನುದಾನವನ್ನು ಪಡೆದು ಕಾರ್ಯನಿರ್ವಹಿಸುತ್ತಿರುವ ಎನ್ಜಿಒದ ಮೂಲಕ ಸ್ಥಳೀಯ ಮಲೆಕುಡಿಯ ಸಮುದಾಯವನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಬಲತ್ಕಾರವಾಗಿ ಹೊರತಳ್ಳಲು ಪ್ರಯತ್ನಿಸುತ್ತಿದ್ದ ವೇಳೆ ಮಲೆಕುಡಿಯರ ಮೇಲಿನ ಈ ರೀತಿಯ ದೌರ್ಜನ್ಯವನ್ನು ಸಂಘಟನೆ ವಿರೋಧಿಸಿತ್ತು ಎಂದು ತಿಳಿಸಿದರು.
ಹೋರಾಟದಲ್ಲಿ ಸ್ಥಳೀಯ ಮಲೆಕುಡಿಯ ಕುಟುಂಬಗಳು ಸಕ್ರಿಯವಾಗಿ ಭಾಗವಹಿಸಿದ್ದು, ಇದರಿಂದಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗದು ಎಂಬುವುದನ್ನು ಅರಿತ ರಾಮಚಂದ್ರ ಭಟ್ಟರು ಸರ್ಕಾರವನ್ನು ದಾರಿ ತಪ್ಪಿಸಲು ಈ ರೀತಿ ಮಾಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ರಾಮಚಂದ್ರ ಭಟ್ಟರ ಹೇಳಿಕೆಯ ಮೇರೆಗೆ ಸ್ಥಳಿಯರಿಗೆ, ಆದಿವಾಸಿಗಳಿಗೆ ದೌರ್ಜನ್ಯವೆಸಗಿದ್ದಲ್ಲಿ ಸಂಘಟನೆ ಸುಮ್ಮನಿರುವುದಿಲ್ಲ ಎಂದು ಸಂಘಟನೆಯ ಸಂಚಾಲಕ ಶೇಖರ ಎಲ್. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಷ್ಪಕ್ಷಪಾತ ತನಿಖೆಯಾಗಲಿ: ಕುತ್ಲೂರು ರಾಮಚಂದ್ರ ಭಟ್ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ಗೆ ಬೆಂಕಿ ಹಚ್ಚಿದ ಪ್ರಕರಣವು ಜನತೆಯಲ್ಲಿ ಸಂಶಯವನ್ನುಂಟು ಮಾಡಿದೆ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ಮಾಡುವುದು ಸೂಕ್ತ. ನಕ್ಸಲ್ ಕಾರ್ಯಾಚರಣೆ ಹೆಸರಲ್ಲಿ ಆದಿವಾಸಿಗಳಿಗೆ ಹಿಂಸೆ ನೀಡತೊಡಗಿದರೆ ಪಕ್ಷ ಹೋರಾಟ ನಡೆಸಬೇಕಾಗುತ್ತದೆ ಎಂದು ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್ವಾದಿ)ದ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಹಾಗೂ ಮುಖಂಡ ಬಿ.ಎಂ. ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.