ವೃದ್ಧೆ ಕೊಲೆಗೈದು ದರೋಡೆ: ದಂಪತಿಗೆ ಜೀವಾವಧಿ ಶಿಕ್ಷೆ
ಪುತ್ತೂರು: ಆರು ವರ್ಷಗಳ ಹಿಂದೆ ವೃದ್ಧಮಹಿಳೆಯ ಕೊಲೆ ಮಾಡಿ ಮನೆ ಮಂದಿಯನ್ನು ಕಟ್ಟಿ ಹಾಕಿ ನಗ- ನಗದು ದರೋಡೆ ನಡೆಸಿದ ಪ್ರಕರಣದ ಆರೋಪಿ ದಂಪತಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 19 ವರ್ಷ ಕಠಿಣ ಸಜೆ, ಜೀವಾವಧಿ ಸಜೆ ಹಾಗೂ ರು. 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗ ಮೂಲದ ನಿವಾಸಿಗಳಾದ ಗಿರೀಶ ಮತ್ತು ಪಾರ್ವತಿ ಶಿಕ್ಷೆಗೊಳಗಾದ ಅಪರಾಧಿಗಳು. ಇವರ 5 ವರ್ಷದ ಪುತ್ರನನ್ನು ಮಂಗಳೂರಿನ ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ನ್ಯಾಯಾಲಯ ಆದೇಶಿಸಿದೆ.
2007 ಆ.27ರಂದು ಕಡಬ ಸಮೀಪದ ರಾಮಕುಂಜ ಕೂವೆಚ್ಚಾಲು ನಿವಾಸಿ ಕೃಷ್ಣರಾಜ ಎಂಬವರ ಮನೆಗೆ ಕೆಲಸಕ್ಕೆಂದು ಬಂದಿದ್ದ ಗಿರೀಶ ಮತ್ತು ಪಾರ್ವತಿ, ಕೃಷ್ಣರಾಜ ಅವರ ತಾಯಿ ಸುನಂದ ಮತ್ತು ಪತ್ನಿ ವಾಣಿ ಅವರನ್ನು ತೋಟದಲ್ಲೇ ಕಟ್ಟಿ ಹಾಕಿ ಬಳಿಕ ಮನೆಗೆ ಬಂದು ಕೃಷ್ಣರಾಜರ ದೂರದ ಸಂಬಂಧಿ ಭಾರತಿ (80) ಅವರ ಕೊಲೆ ನಡೆಸಿ ಮನೆಯೊಳಗೆ ಕಪಾಟಿನಲ್ಲಿಸಲಾದ್ದ ಒಂದೂವರೆ ಕೆ.ಜಿ.ಗೂ ಮಿಕ್ಕಿದ ಚಿನ್ನಾಭರಣ, ರು. 20 ಸಾವಿರ ನಗದು ಮತ್ತು ವಾಣಿ ಅವರ ಪರ್ಸ್‌ನಿಂದ ರು. 2 ಸಾವಿರ ನಗದು ಹಣ ದರೋಡೆಗೈದು ಪರಾರಿಯಾದ್ದರು.
ಉಪ್ಪಿನಂಗಡಿಯಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದ ಕೃಷ್ಣರಾಜ್ ತಮ್ಮ ತೋಟದ ಕೆಲಸಕ್ಕಾಗಿ ಗಿರೀಶ ಹಾಗೂ ಪಾರ್ವತಿ ಎಂದು ಹೇಳಿಕೊಂಡು ಬಂದಿದ್ದ ದಂಪತಿಯನ್ನು ನೇಮಿಸಿಕೊಂಡಿದ್ದರು. ಕೆಲಸಕ್ಕೆ ಸೇರಿದ ಒಂದೂವರೆ ತಿಂಗಳ ಬಳಿಕ ತೋಟದ ಆಳುಗಳೆಲ್ಲ ರಜೆಯಲ್ಲಿ ತೆರಳಿದ್ದ ದಿನ ದಂಪತಿ ಈ ಕೃತ್ಯ ಎಸಗಿದ್ದರು. ಪೊಲೀಸರು ಮೊಬೈಲ್ ಫೋನ್ ಜಾಲದ ಮೂಲಕ ಆರೋಪಿಗಳನ್ನು 2007 ನ.28ರಂದು ಕುಂದಾಪುರ ತಾಲೂಕು ಕೆರ್ಗಲ್ಲು ಗ್ರಾಮದಲ್ಲಿ ಬಂಧಿಸಿದ್ದರು. ಚಿನ್ನಾಭರಣಗಳನ್ನು ಕುಂದಾಪುರ ತಾಲೂಕು ಕಂಬದ ಕೋಣೆಯ ರಾಮಚಂದ್ರ ಗಾಣಿಗ ಮತ್ತು ಮಂಜುನಾಥ ಪೂಜಾರಿ ಅವರಿಂದ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ಬಂಧನದ ವೇಳೆ ಗಿರೀಶನ ಪತ್ನಿ ಪಾರ್ವತಿ ಗರ್ಭಿಣಿಯಾಗಿದ್ದು ಬಳಿಕ ಕಾರಾಗೃಹದಲ್ಲಿ ಈಕೆಗೆ ಗಂಡು ಮಗು ಜನಿಸಿತ್ತು. ಈ ಮಗುವಿಗೆ ಕೃಷ್ಣ ಎಂದು ಹೆಸರಿಡಲಾಗಿತ್ತು. ಈ ಮಗು ಈತನಕ ಕಾರಾಗೃಹದಲ್ಲಿಯೇ ತಂದೆ ತಾಯಿಯೊಂದಿಗೆ ಬೆಳೆದಿದ್ದು, ಕೃಷ್ಣನನ್ನು ಮುಂದೆ ಮಂಗಳೂರಿನ ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯಕ್ಕೆ ಒಪ್ಪಿಸಲು ನ್ಯಾಯಾಲಯ ಆದೇಶಿಸಿದೆ.
ವಿಪರೀತ ಮದ್ಯಸೇವನೆ; ವ್ಯಕ್ತಿ ಆತ್ಯಹತ್ಯೆ
ಅಜೆಕಾರು: ಇಲ್ಲಿನ ಕಡ್ತಲ ಗ್ರಾಮದ ಮಾಣಿಬೆಟ್ಟು ಎಂಬಲ್ಲಿ ವ್ಯಕ್ತಿಯೊಬ್ಬರು ಮದ್ಯಪಾನದ ಚಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಮೃತರು ರಮೇಶ ಹೆಗ್‌ಡೆ (46), ಅವರು ಅವಿವಾಹಿತರಾಗಿದ್ದು, ಇದೇ ಕಾರಣಕ್ಕೆ ವಿಪರೀತ ಮದ್ಯಪಾನ ಮಾಡುತ್ತಿದ್ದರು. ಇದರಿಂದ ಜಿಗುಪ್ಸೆಗೊಂಡು ಸೋಮವಾರ ರಾತ್ರಿ ಮನೆಯ ಹತ್ತಿರದ ಮರದ ರೆಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಹೋದರ ಉಮೇಶ ಹೆಗ್ಡೆ ಅವರು ನೀಡಿದ ದೂರಿನಂತೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಗೆ ಹಾರಿ ವೃದ್ಧ ಆತ್ಮಹತ್ಯೆ
ಕಾರ್ಕಳ: ಇಲ್ಲಿನ ಕಸಬಾ ಗ್ರಾಮ ತೋಟದಮನೆ ಎಂಬಲ್ಲಿ ವಯೋವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಎಚ್ಚು ಶೆಟ್ಟಿಗಾರ್ (80) ಮೃತರು. ಅವರು ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಮಗ ಹರೀಶ್ ಶೆಟ್ಟಿಗಾರ್ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ಯಾಕ್ಸಿ ಚಾಲಕ, ತಂಡದಿಂದ ವೈದ್ಯರ ದರೋಡೆ
ಉಡುಪಿ: ಇತ್ತೀಚೆಗೆ ಉಡುಪಿಗೆ ರಾಜ್ಯ ಮಟ್ಟದ ವೈದ್ಯಾಧಿಕಾರಿಗಳ ಸಮ್ಮೇಳನಕ್ಕೆ ಬಂದಿದ್ದ ಮಂಗಳೂರಿನ ವೈದ್ಯರೊಬ್ಬರನ್ನು ಉಡುಪಿ ಟ್ಯಾಕ್ಸಿ ಚಾಲಕ ಮತ್ತವನ ಗೆಳೆಯರು ದರೋಡೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದರೋಡೆಗೊಳಗಾದವರು ಡಾ. ಅನಿಲ್ ಕುಮಾರ್ ಎ.ಎಸ್. ಇವರು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಅನಸ್ತೇಶಿಯಾ ವಿಭಾಗದ ವೈದ್ಯರಾಗಿದ್ದು ನ.9ರಂದು ಉಡುಪಿಯಲ್ಲಿ ಸಮ್ಮೇಳನಕ್ಕೆ ಬಂದು ಕಾರ್ಯಕ್ರಮ, ರಾತ್ರಿ ಊಟ ಮುಗಿಸಿ 11.30ಕ್ಕೆ ವಾಪಾಸು ಮಂಗಳೂರಿಗೆ ಹೋಗಲು ಉಡುಪಿ ಮಿಶನ್ ಕಾಂಪೌಂಡಿನಿಂದ ಬಿಳಿ ಬಣ್ಣದ ಕಾರು ಗೊತ್ತು ಮಾಡಿದ್ದರು. ನಂತರ ಅದರಲ್ಲಿ 3- 4 ಕಿ.ಮೀ ಹೋಗಿದ್ದು ಕಾರು ಚಾಲಕ ಕಾರು ಕೆಟ್ಟಿದೆ ಎಂದು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾನೆ. ಅರ್ಧ ಗಂಟೆ ನಂತರ ಅಲ್ಲಿಗೆ ಮೋಟಾರು ಸೈಕಲ್‌ನಲ್ಲಿ ಬಂದ ಇಬ್ಬರು ವೈದ್ಯರನ್ನು ಬೇರೆ ವಾಹನದಲ್ಲಿ ಕಳುಹಿಸಿಕೊಡುವುದಾಗಿ ಹತ್ತಿಸಿಕೊಂಡು ವಾಪಾಸ್ ಉಡುಪಿ ಕಡೆಗೆ ಕರೆದುಕೊಂಡು ಬಂದು ನಂತರ ಇನ್ನೊಂದು ಕಾರಿನಲ್ಲಿ ಕೂರಿಸಿದ್ದಾರೆ. ಅದರಲ್ಲಿ ಚಾಲಕ, ಮತ್ತು ಮೊದಲೇ ಕುಳಿತಿದ್ದ ಇಬ್ಬರು ಹಾಗೂ ಬೈಕ್‌ನಲ್ಲಿ ವೈದ್ಯರನ್ನು ಕರೆತಂಜ ಇಬ್ಬರು ಸಹಿತ 5 ಮಂದಿ ಸೇರಿ ವೈದ್ಯರನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿ ಚೂರಿ ತೋರಿಸಿ ವೈದ್ಯರ ಚಿನ್ನದ ಉಂಗುರ, ಚಿನ್ನದ ಸರ, ನಗದು 5,000, ಮೊಬೈಲ್ ಹಾಗೂ ಎಟಿಎಂ ಕಾರ್ಡ್‌ನ್ನು ಕಿತ್ತುಗೊಂಡು ರಾತ್ರಿ 1.30ರ ಸುಮಾರಿಗೆ ರಸ್ತೆಬದಿ ಇಳಿಸಿ ಪರಾರಿಯಾಗಿದ್ದಾರೆ. ಮಂಗಳವಾರ ಪರಿಶೀಲಿಸಿದಾಗ ಎಟಿಎಂ ಕಾರ್ಡ್‌ನಿಂದ 42,000 ಡ್ರಾ ಮಾಡಿದ್ದು ವೈದ್ಯರಿಗೆ ಚಿನ್ನಾಭರಣ ಸಹಿತ ಸುಮಾರು 1 ಲಕ್ಷ ನಷ್ಟವುಂಟಾಗಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.