ಇನ್ನೊಮ್ಮೆ ಬರಬೇಡಿ!
ಬೆಳ್ತಂಗಡಿ: 'ಒಂದಿಂಚೂ ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಗ್ಯಾಸ್ ಪೈಪ್ಲೈನ್ ಯೋಜನೆಗಾಗಿ ಬಿಟ್ಟುಕೊಡುವುದಿಲ್ಲ. ಇನ್ನು ಇದರ ಹೆಸರು ಹೇಳಿಕೊಂಡು ಇಲ್ಲಿಗೆ ಬರಬೇಡಿ. ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ' ಎಂದು ಸಂತ್ರಸ್ತರು ಪುತ್ತೂರು ಸಹಾಯಕ ಆಯುಕ್ತರ ಮುಂದೆ ಖಡಾಖಂಡಿತವಾಗಿ ಹೇಳಿ ಸರ್ವೇಗೆ ಬಂದವರನ್ನು ಮರಳಿ ಕಳುಹಿಸಿದ ಘಟನೆ ನೆರಿಯ ಗ್ರಾಮದ ಪಿಜಕ್ಕಳ ಎಂಬಲ್ಲಿ ಬುಧವಾರ ನಡೆದಿದೆ.
ಪುತ್ತೂರು ಸಹಾಯಕ ಆಯುಕ್ತರು ಪೊಲೀಸ್ ಬಲದೊಂದಿಗೆ ಪಿಜಕ್ಕಳದಲ್ಲಿ ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ ಪಂಪ್ ಹೌಸ್ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ 7.10 ಎಕ್ರೆ ಜಮೀನಿನ ಸರ್ವೇ ನಡೆಸಲು ಆಗಮಿಸಿದ್ದರು. ರಸ್ತೆಯಲ್ಲೇ ಈ ತಂಡವನ್ನು ತಡೆದ ಗ್ರಾಮಸ್ಥರು, ತಮ್ಮ ಜಮೀನಿಗೆ ಪ್ರವೇಶಿಸಲು ಯಾರಿಗೂ ಅವಕಾಶ ನೀಡಲಿಲ್ಲ. ಅಲ್ಲಿಯೇ ಸಂತ್ರಸ್ತ ಜನರೊಂದಿಗೆ ಮಾತುಕತೆ ನಡೆಸಿದ ಎಸಿ, ಇದೀಗ ಕೇವಲ ಜಂಟಿ ಸರ್ವೇ ನಡೆಸಿ ಎಷ್ಟು ಪರಿಹಾರ ನೀಡಲು ಸಾಧ್ಯ ಎಂಬ ಬಗ್ಗೆ ಹೇಳಲಾಗುತ್ತದೆಯಷ್ಟೇ. ಜನರ ಒಪ್ಪಿಗೆ ಇದ್ದೇ ಜಮೀನನ್ನು ಯೋಜನೆಗಾಗಿ ಪಡೆಯಲಾಗುವುದು ಎಂದರು.
ಪಹಣಿಪತ್ರದಲ್ಲಿ ಕೃಷಿ ದಾಖಲಾಗದಿದ್ದರೆ ಜಂಟಿ ಸರ್ವೇಯಲ್ಲಿ ಅದನ್ನು ಗುರುತಿಸಲು ಸಾಧ್ಯ. ಅದೇ ರೀತಿ ಪಹಣಿ ಪತ್ರದಲ್ಲಿ ಕೃಷಿ ಭೂಮಿ ದಾಖಲಿಸಲು ಗ್ರಾಮ ಕರಣಿಕರಿಗೆ ಕೂಡಲೆ ಅರ್ಜಿ ಸಲ್ಲಿಸಿ ಹದಿನೈದು ದಿನದೊಳಗೆ ಅದನ್ನು ದಾಖಲಿಸುವ ಜವಾಬ್ದಾರಿ ತನ್ನದು ಎಂದು ಎಸಿ ಭರವಸೆ ನೀಡಿದರು.
ಭೂಮಿ ಕೊಡೆವು: ಆದರೆ ಸಂತ್ರಸ್ತ ಜನರು ಯಾವುದನ್ನೂ ಒಪ್ಪದೆ, ತಮಗೆ ಯೋಜನೆಯೇ ಬೇಡ, ಮಾಹಿತಿಯೂ ಬೇಡ ಮತ್ತು ನಮ್ಮ ಜಮೀನಿನಲ್ಲಿ ಸರ್ವೇ ಮಾಡಲು ಅವಕಾಶ ನೀಡುವುದಿಲ್ಲ ಎಂದು ಒಕ್ಕೂರಲಿನಿಂದ ಅಭಿಪ್ರಾಯ ತಿಳಿಸಿದರು.
'ವಾರಕ್ಕೊಮ್ಮೆ ಎಂಬಂತೆ ಅಧಿಕಾರಿಗಳು ಒಂದೊಂದೇ ಹೆಸರು ಹೇಳಿಕೊಂಡು ಬರುತ್ತಿದ್ದಾರೆ. ಅವರಿಗಾಗಿ ಕಾದು ಕುಳಿತುಕೊಳ್ಳಲು ಅವಕಾಶವಿಲ್ಲ. ಇನ್ನು ಇದರ ಹೆಸರು ಹೇಳಿಕೊಂಡು ಯಾವ ಅಧಿಕಾರಿಗಳೂ ಇಲ್ಲಿಗೆ ಬರಬಾರದು. ಇದೇ ಕೊನೆಯ ಬಾರಿಗೆ ಹೇಳುತ್ತಿದ್ದೇವೆ' ಎಂದು ಎಚ್ಚರಿಕೆ ನೀಡಿದರು. ಕೊನೆಗೆ ಅಧಿಕಾರಿಗಳು ಜನರ ಒತ್ತಡಕ್ಕೆ ಮಣಿದು ಯಾವುದೇ ಸರ್ವೇ ಕಾರ್ಯಕ್ಕೆ ಮುಂದಾಗದೆ ಹಿಂತಿರುಗಿದರು.
ಎಸಿ ಕೃಷ್ಣಮೂರ್ತಿ, ಕೆಇಡಿಬಿ ಅಧಿಕಾರಿ ಗುರುದೇವ್, ಎಚ್ಪಿಸಿಎಲ್ನ ಯುವರಾಜ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಲಿಂಗಪ್ಪ ಪೂಜಾರಿ, ಬೆಳ್ತಂಗಡಿ ಎಸ್ಐ ಪ್ರಕಾಶ್ ದೇವಾಡಿಗ, ವಿಟ್ಲ ಎಸ್ಐ ಮಾಧವ ಕೂಡ್ಲು, ಪುಂಜಾಲಕಟ್ಟೆ ಎಸ್ಐ ದಯಾನಂದ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು, ರೈತ ಸಂಘದ ಹಸಿರುಸೇನೆ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ್ಚ, ಮುಖಂಡರಾದ ರೂಪೇಶ್ ಪೈ, ಅಶೋಕ್ ರೈ, ಧರ್ಮಸ್ಥಳ ಗ್ರಾ.ಪಂ. ಸದಸ್ಯ ಚಂದನ್ ಕಾಮತ್, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷ ಗಫೂರ್, ನೆರಿಯ ಗ್ರಾ.ಪಂ. ಸದಸ್ಯರಾದ ಅಶ್ರಫ್, ನೀಲಯ್ಯ ಗೌಡ, ಪಿ.ಕೆ. ರಾಜನ್, ಪುದುವೆಟ್ಟು ಗ್ರಾ.ಪಂ. ಸದಸ್ಯ ರೋಹಿ ಜೋಸೆಫ್ ಇದ್ದರು.
ಸಂತ್ರಸ್ತರೊಂದಿಗೆ ಸಮಾಲೋಚನೆ: ಇದಕ್ಕೂ ಮುನ್ನ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಎಸಿ ನೇತೃತ್ವದಲ್ಲಿ ಸಂತ್ರಸ್ತರೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಯೋಜನೆ ಮತ್ತು ಪರಿಹಾರದ ಬಗ್ಗೆ ಮಾಹಿತಿ ನೀಡಿದರು. ಆದರೆ ಸಂತ್ರಸ್ತ ಜನರು ಮಾತ್ರ ಅಧಿಕಾರಿಗಳ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಯೋಜನೆ ಬೇಡ ಎಂಬ ನಿಲುವಿಗೆ ಅಂಟಿಕೊಂಡರು. ಅಂತಿಮವಾಗಿ ಯಾವುದೇ ನಿರ್ಧಾರವಿಲ್ಲದೆ ಸಭೆಯನ್ನು ಕೊನೆಗೊಳಿಸಿ ಸ್ಥಳಕ್ಕೆ ಭೇಟಿ ನೀಡಿದ್ದರು.
2 ಸಾವಿರ ಪೈಪ್ ಸಿದ್ಧ!
ಒಂದೆಡೆಯಿಂದ ಜನರ ಒಪ್ಪಿಗೆ ಪಡೆದೇ ಗ್ಯಾಸ್ ಪೈಪ್ ಲೈನ್ ಯೋಜನೆ ಅನುಷ್ಠಾನಗೊಳಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದರೂ ಮತ್ತೊಂದೆಡೆ ಪೈಪ್ಲೈನ್ ಅಳವಡಿಕೆ ಸಿದ್ಧತೆಗಳು ಭರದಿಂದ ಸಾಗುತ್ತಿರುವುದು ಕಂಡು ಬರುತ್ತಿದೆ. ಸುಮಾರು ಎರಡೂವರೆ ಸಾವಿರ ಬೃಹತ್ ಕಬ್ಬಿಣದ ಪೈಪ್ಗಳನ್ನು ಉಜಿರೆ ಸನಿಹ ಕಲ್ಮಂಜ ಗ್ರಾ.ಪಂ.ನ ಖಾಸಗಿ ಜಾಗದಲ್ಲಿ ಈಗಾಗಲೇ ಶೇಖರಿಸಿಡಲಾಗಿದೆ. ಪುಣೆ ಮೂಲದ ಕಂಪೆನಿಯೊಂದು ಪೈಪ್ಲೈನ್ ಅಳವಡಿಕೆಗೆ ಟೆಂಡರ್ ಪಡೆದಿರುವುದಾಗಿ ತಿಳಿದುಬಂದಿದ್ದು, ಕಾಮಗಾರಿಗೆ ಅಳವಡಿಸಲು ಬೇಕಾಗಿರುವ ಬೃಹತ್ ಯಂತ್ರೋಪಕರಣಗಳನ್ನು ಮಹಾರಾಷ್ಟ್ರ ಹಾಗೂ ಗುಜರಾತ್ನಿಂದ ತರಿಸಿಡಲಾಗಿದೆ.