ಕಂದಕಕ್ಕೆ ಉರುಳಿದ ಮ್ಯಾಕ್ಸಿಕ್ಯಾಬ್: 10ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಗಂಭೀರ ಗಾಯ
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ಮ್ಯಾಕ್ಸಿಕ್ಯಾಬ್ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದು ಹತ್ತಕ್ಕೂ ಹೆಚ್ಚು ಯಾತ್ರಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ 9 ಗಂಟೆಗೆ ನಡೆದಿದೆ.
ಗಾಯಾಳುಗಳನ್ನು ಮದ್ದೂರಿನ ಜಯಂತ (14), ಗುರುರಾಜ್ (15), ಆಂಜನೇಯ (50), ಕಮಲಮ್ಮ (38), ಶಿವಲಿಂಗಯ್ಯ (39), ಬೊಮ್ಮೇಶ್ (26), ಗೌರಮ್ಮ (26) ಎಂದು ಗುರುತಿಸಲಾಗಿದೆ. ಉಳಿದವರ ವಿವರ ತಿಳಿದುಬಂದಿಲ್ಲ.
ಮದ್ದೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮ್ಯಾಕ್ಸಿಕ್ಯಾಬ್ (ಕೆಎ 02ಎಎ 190) ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಸುಮಾರು ಹತ್ತು ಅಡಿ ಆಳದ ತೋಟಕ್ಕೆ ಬಿತ್ತು. ಪರಿಣಾಮ ಸುಮಾರು 10ಕ್ಕೂ ಹೆಚ್ಚು ಯಾತ್ರಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ವಾಹನದಲ್ಲಿ 20ರಷ್ಟು ಮಂದಿ ಇದ್ದರು ಎನ್ನಲಾಗಿದೆ. ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಗಾಯಾಳುಗಳನ್ನು ವಾಹನದಿಂದ ಹೊರ ತಂದು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಗಾಯಾಳುಗಳ ಪೈಕಿ ಹಲವರು ಉಜಿರೆ, ನೆಲ್ಯಾಡಿ, ಪುತ್ತೂರು, ಮಂಗಳೂರು ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದಾರೆ. ಅವರ ಪೈಕಿ ಐವರ ಸ್ಥಿತಿ ತುಸು ಗಂಭೀರವಾಗಿದೆ ಎಂದು ತಿಳಿದುಬಂದಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು, ಪುತ್ತೂರು ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.