ಕಡೆಂಗೋಡ್ಲು ಕಮಲಾ ಭಟ್ ನಿಧನ
ಮಂಗಳೂರು: ಕನ್ನಡ ಸಾರಸ್ವತಲೋಕದ ಹೆಸರಾಂತ ಕವಿ ದಿ.ಕಡೆಂಗೋಡ್ಲು ಶಂಕರ ಭಟ್ಟರ ಧರ್ಮಪತ್ನಿ ಕಮಲಮ್ಮ(98)ಬುದವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ರಾಜ್ಯದ ಮಾಜಿ ಕಾನೂನು ಅಧೀನ ಕಾರ್ಯದರ್ಶಿ ಕೆ.ಈಶ್ವರ ಭಟ್, ಮಣಿಪಾಲ ಡೆಂಟಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಸೀತಾರಾಮ ಭಟ್ ಸಹಿತ ಮೂವರು ಗಂಡು ಮಕ್ಕಳು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಮಲಮ್ಮ ನಿಧನಕ್ಕೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರ ನಿರ್ದೇಶಕ ಹೇರಂಜೆ ಕೃಷ್ಣ ಭಟ್ ಸಂಪಾತ ವ್ಯಕ್ತಪಡಿಸಿದ್ದಾರೆ.
ನಾಳೆ ಕಾಲ್ನಡಿಗೆ ಜಾಥಾ
ಮಂಗಳೂರು: ನ.17ರಂದು ಬೆಂಗಳೂರಲ್ಲಿ ನಡೆಯುವ ನರೇಂದ್ರ ಮೋದಿ ರ್ಯಾಲಿ ಸಲುವಾಗಿ ಬಿಜೆಪಿ ಜಿಲ್ಲಾ ಯುವಮೋರ್ಚಾದಿಂದ ನ.15ರಂದು ಮಂಗಳೂರಿನಲ್ಲಿ ಕಾಲ್ನಾಡಿಗೆ ಜಾಥಾ ನಡೆಯಲಿದೆ. ಸಂಜೆ 6.30ಕ್ಕೆ ನೆಹರೂ ಮೈದಾನದಿಂದ ಬಿಜೆಪಿ ಕಾಲ್ನಡಿಗೆ ಜಾಥಾ ಹೊರಟು ಜಾಥಾ ಜತೆ ಸ್ತಬ್ಧ ಚಿತ್ರ ಇರಲಿದ್ದು, ಬಿಜೆಪಿ ಕಚೇರಿ ವರೆಗೆ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೆಕ್ಕಾಚಾರವಿಲ್ಲದಿದ್ದರೆ ಸುಖಜೀವನ ಸಾಧ್ಯವಿಲ್ಲ: ರಾಘವೇಶ್ವರ ಶ್ರೀ
ವಿಟ್ಲ: ಜಟ್ಟಿ ತನ್ನ ಎದುರಾಳಿಯ ಹೊಡೆತದ ಬಗ್ಗೆ ಲೆಕ್ಕಾಚಾರ ಹಾಕದಿದ್ದರೆ ಆತ ಸೋಲುವುದು ಖಚಿತ. ಅದೇ ರೀತಿ ನಾವು ಬದುಕಿನಲ್ಲಿ ಲೆಕ್ಕಾಚಾರ ಹಾಕದಿದ್ದರೆ ಸುಖ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ತಿಳಿಸಿದರು. ಅವರು ಮಂಗಳವಾರ ಕೈರಂಗಳದ ಪುಣ್ಯಕೋಟಿ ನಗರದ ಶ್ರೀ ಶಾರದಾ ಗಣಪತಿ ವಿದ್ಯಾ ಕೇಂದ್ರದಲ್ಲಿ ಶ್ರೀರಾಮಕಥಾದ ಮೂಲಕ ವಾಲ್ಮೀಕಿ ರಾಮಾಯಣದ ಮೂರನೇ ದಿನವಾದ ಮಂಗಳವಾರ ಪ್ರವಚನ ನೀಡಿ, ತನಗೆ ಕೊಟ್ಟದ್ದನ್ನು ವಾಪಾಸ್ ಕೊಡುವುದು ಮಾನವತ್ವವಾದರೆ ಅಪಕಾರ ಮಾಡುವವನಿಗೂ ಉಪಕಾರ ಮಾಡುವುದು ದೇವತ್ವ. ಚಿತ್ರ ವಿಚಿತ್ರ ಹಿಂಸೆಗಳನ್ನು ನೀಡುತ್ತಿದ್ದ ರಾಕ್ಷಸಿಯರಿಗೂ ಒಳಿತು ಬಯಸಿದ ಸೀತೆಯಲ್ಲಿ ನಾವು ದೇವತ್ವವನ್ನು ಕಾಣಬಹುದು ಎಂದು ಹೇಳಿದರು. ರಾಮ ಕಥೆಯಲ್ಲಿ ಸೀತಾ- ಹನುಮನ ಭೇಟಿಯ ಕುರಿತು ಶ್ರೀಗಳು ವಿವರಿಸುತ್ತಾರೆ. ರೂಪಕದಲ್ಲಿ ತ್ರೇತಾಯುಗದಲ್ಲಿ ಹನುಮ ಸೀತೆಗೆ ಹೇಳಿದ ರಾಮ ಕಥೆಯ ಸನ್ನಿವೇಶ ಮತ್ತು ರಾಮ ಕೊಟ್ಟ ಉಂಗುರವನ್ನು ಸೀತೆಗೆ ನೀಡಿದ ಪರಿ ಅದ್ಭುತವಾಗಿ ಮೂಡಿ ಬಂತು. ಅದಿತಿ ಕೆ.ಟಿ. ಭಟ್, ವಸುಂದರ ರಾಮ ಕಥೆಯ ಬಳಗಕ್ಕೆ ಸೇರಿ ಹಾಡಿದರು.