ಅಡಕೆ ಉತ್ಪಾದನಾ ವೆಚ್ಚ ವಿಸ್ತೃತ ಅಧ್ಯಯನ: ಕ್ಯಾಂಪ್ಕೋ
ಮಂಗಳೂರು: ಅಡಕೆಯ ಔದ್ಯಮಿಕ ಬಳಕೆಯ ಸಾಧ್ಯಾಸಾಧ್ಯತೆ ಬಗ್ಗೆ ಕ್ಯಾಂಪ್ಕೋ ಪರಿಶೀಲಿಸುತ್ತಿದೆ. ಉತ್ಪಾದನಾ ವೆಚ್ಚದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸುತ್ತಿರುವ ತಜ್ಞರ ಸಮಿತಿಯು ಇನ್ನಷ್ಟು ಅಡಕೆ ಬೆಳೆ ಪ್ರದೇಶಗಳನ್ನು ವಿಸ್ತೃತವಾಗಿ ಸಮೀಕ್ಷೆ ನಡೆಸಲಿದೆ. ಬಳಿಕ ಶೀಘ್ರವೇ ಉತ್ಪಾದನಾ ವೆಚ್ಚದ ಅಂತಿಮ ವರದಿಯನ್ನು ನೀಡಲಿದೆ.
2013-14ನೇ ಸಾಲಿನ ಅಡಕೆ ಉತ್ಪಾದನಾ ವೆಚ್ಚ ಕಂಡುಹಿಡಿಯುವುದಕ್ಕಾಗಿ ಕ್ಯಾಂಪ್ಕೋ ಹಾಗೂ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ತಜ್ಞರ ಸಮಿತಿಯ ಎರಡನೇ ಸಭೆ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಂಗಳೂರು ಕೃಷಿ ವಿಸ್ವವಿದ್ಯಾಲಯ ಕೃಷಿ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಪ್ರಕಾಶ್ ಕಮ್ಮರಡಿ ಅವರನ್ನು ತಜ್ಞರ ಸಮಿತಿಗೆ ಸದಸ್ಯರಾಗಿ ಆಹ್ವಾನಿಸಲಾಯಿತು.
ಅಡಕೆಯಲ್ಲಿ ಅಪಾರ ಔಷಧ ಗುಣಗಳಿದ್ದು, ಈ ಬಗ್ಗೆ ಸಂಶೋಧನೆ ನಡೆದಿದೆ. ದೋಣಿ ಮತ್ತು ಹಡಗುಗಳಲ್ಲಿ ತುಕ್ಕು ಹಿಡಿಯುವುದನ್ನು ತಡೆಯಲು ಕೆಂಪಡಕೆ ಪುಡಿಯನ್ನು ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕು. ಅಡಕೆಯ ಟಾನಿಕ್ ತಯಾರಿಕೆ ಕುರಿತು ಸಂಶೋಧನೆಯ ಅಗತ್ಯವಿದೆ. ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾಂತ್ರೀಕರಣದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ. ಉತ್ಪಾದನಾ ವೆಚ್ಚ ಕಡಿಮೆಗೊಳಿಸಲು ಇರುವ ಸಾಧ್ಯತೆಯತ್ತ ಕೃಷಿಕರು ಗಮನಹರಿಸಬೇಕಾಗಿದೆ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿತು. ಸಮಿತಿ ಮುಖ್ಯಸ್ಥ ಡಾ.ಜಿ.ವಿ.ಜೋಷಿ ಇದ್ದರು.
ಹೊರಗೆ ಅಡಕೆ ಮಾರಾಟ ಬೇಡ
ಮಾರುಕಟ್ಟೆಯಲ್ಲಿ ಅಡಕೆ ದರ ಏರುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹಳ್ಳಿಗಳಲ್ಲಿ ರೈತರ ಮನೆಯಿಂದ ಹೆಚ್ಚಿನ ದರದ ಆಶ್ವಾಸನೆ ನೀಡಿ ಅಡಕೆ ಖರೀದಿಸುತ್ತಾರೆ. ಪುತ್ತೂರು ಮತ್ತಿತರ ಕಡೆಗಳಲ್ಲಿ ರೈತರಿಗೆ ಹಣ ನೀಡದೆ ವ್ಯಾಪಾರಿಗಳು ಮೋಸ ಮಾಡಿದ್ದು ವರದಿಯಾಗಿದೆ. ಆದ್ದರಿಂದ ಅಡಕೆಯನ್ನು ಬಿಲ್ಲು ರಸೀತಿ ನೀಡದವರಿಗೆ ಮಾರಾಟ ಮಾಡಬೇಡಿ ಎಂದು ಕ್ಯಾಂಪ್ಕೋ ಪ್ರಕಟಣೆ ವಿನಂತಿ ಮಾಡಿದೆ.