ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್: ಜೈನ್
ಮಂಗಳೂರು: ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ರಚನೆಗೆ ಸರ್ಕಾರ ನಿರ್ಧರಿಸಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ನಗರದ ಮಂಗಳಾ ಕ್ರೀಡಾಂಗಣದಲ್ಲಿ ಗುರುವಾರ ರಾಜ್ಯ ಮಟ್ಟದ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಅತಿ ಹೆಚ್ಚು ಸಿಂಥೆಟಿಕ್ ಟ್ರ್ಯಾಕ್ ಇರುವುದು ಕರ್ನಾಟಕದಲ್ಲಿ ಎಂದ ಅವರು, ಇಂಥ ಟ್ರ್ಯಾಕ್ ರಾಜ್ಯದ 7 ಕಡೆಗಳಲ್ಲಿದೆ. ಇನ್ನೂ 4 ಕಡೆ ಸಿಂಥೆಟಿಕ್ ಟ್ರ್ಯಾಕ್ ರಚಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡೆಗೆ ಒತ್ತು ನೀಡುತ್ತಿದ್ದು, ರಾಜ್ಯದ ಕ್ರೀಡಾಳುಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಹೇಳಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ಪೈಕಾದಿಂದ ಕ್ರೀಡೆಗೆ ಹೆಚ್ಚಿನ ಉತ್ತೇಜನ ಸಿಗುತ್ತಿದೆ. ಹಿಂದೆ ನಗರದ ಕ್ರೀಡಾಪಟುಗಳು ಮಿಂಚುತ್ತಿದ್ದರೆ ಈಗ ಗ್ರಾಮಾಂತರ ಕ್ರೀಡಾಪಟುಗಳು ಸಾಧನೆ ತೋರಿಸುತ್ತಿದ್ದಾರೆ. ಪಠ್ಯ ಚಟುವಟಿಕೆ ಜತೆ ಕ್ರೀಡೆಗೂ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಅರ್ಜುನ ಪ್ರಶಸ್ತಿ ವಿಜೇತ ವಂದನಾ ಶ್ಯಾನುಭಾಗ್, ಶಿಕ್ಷಣ ಸಂಸ್ಥೆಗಳು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಪೈಕಾ ಕ್ರೀಡಾಕೂಟ ಉಪನಿರ್ದೇಶಕ ರಮೇಶ್ ಪ್ರಾಸ್ತಾವಿಕದಲ್ಲಿ ನ.27ರಿಂದ ಹಾವೇರಿಯಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್, ಖೋಖೋ ವಿಭಾಗದಲ್ಲಿ ರಾಜ್ಯದ ಕ್ರೀಡಾಪಟುಗಳು ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ನಮಿತಾ ಪ್ರತಿಜ್ಞೆ ಬೋಧಿಸಿದರು.