ಜಿಲ್ಲಾ ಮಟ್ಟದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ
ಬಂಟ್ವಾಳ: ಗ್ರಂಥಾಲಯಗಳಲ್ಲಿ ಕನಿಷ್ಠ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಂಥಫಾಲಕರನ್ನು ಹುದ್ದೆಯಲ್ಲಿ ಖಾಯಂಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಹಾಗೂ ಬಂಟ್ವಾಳ ಶಾಖಾ ಗ್ರಂಥಾಲಯ ಗುರುವಾರ ಬಿ.ಸಿ.ರೋಡಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ 'ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ' ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ಜ್ಞಾನದ ವಿಕಸನಕ್ಕೆ ಪುಸ್ತಕ ಅತಿ ಅಗತ್ಯ ಎಂದು ಅಭಿಪ್ರಾಯಿಸಿದ ಅವರು, ಪುಸ್ತಕ ಓದುವಿಕೆಯ ಹವ್ಯಾಸದಿಂದ ವ್ಯಕ್ತಿಯಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದರು. ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್, ಜಿ.ಪಂ.ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ನಳಿನಿ ಶೆಟ್ಟಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ ಅತಿಥಿಗಳಾಗಿದ್ದರು. ಗ್ರಂಥಾಲಯ ಸಿಬ್ಬಂದಿ ಹಾಗೂ ಗ್ರಾ,ಪಂ.ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಸಿಬ್ಬಂದಿ ಸೇವಾ ಪುರಸ್ಕಾರವನ್ನು ಸಚಿವ ರೈ ನೀಡಿ ಗೌರವಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಸಿ.ಜೆ.ವೆಂಕಟೇಶ ಸ್ವಾಗತಿಸಿದರು. ಬಂಟ್ವಾಳ ಶಾಖೆಯ ಸಹಾಯಕ ಗ್ರಂಥಪಾಲಕಿ ನಮಿತ ಬಿ. ವಂದಿಸಿದರು. ಮೂಡುಬಿದಿರೆ ಗ್ರಂಥಾಲಯದ ಮೇಲ್ವಿಚಾರಕಿ ಪ್ರನಿತಪ್ರಿಯ ಮೊಂತೆರೋ ನಿರ್ವಹಿಸಿದರು.