ತಣ್ಣೀರುಪಂತ: ಸಿಡಿಲು ಬಡಿದು ಇಬ್ಬರು ಮಕ್ಕಳಿಗೆ ಗಾಯ, ಮನೆಗೆ ತೀವ್ರ ಹಾನಿ
ಉಪ್ಪಿನಂಗಡಿ/ವಿಟ್ಲ: ಗುರುವಾರ ನಸುಕಿನ ವೇಳೆ ಉಪ್ಪಿನಂಗಡಿ ಸುತ್ತಮುತ್ತ ಡಿಢೀರ್, ಭಾರಿ ಸಿಡಿಲಬ್ಬರದ ಗಾಳಿ ಮಳೆ ಸುರಿದಿದ್ದು, ತಣ್ಣೀರುಪಂತದ ಮನೆಯೊಂದಕ್ಕೆ ಸಿಡಿಲು ಬಡಿದು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ತಣ್ಣೀರುಪಂತ ಗ್ರಾಮದ ಕಲ್ಲೇರಿಯ ಹಲಸಿನಕೋಡಿ ಎಂಬಲ್ಲಿ ದೇವಕಿ ಎಂಬವರ ಮನೆಗೆ ನಸುಕಿನಲ್ಲಿ ಸಿಡಿಲಾಘಾತವಾಗಿದೆ.
ಮನೆಯಲ್ಲಿ ಮಲಗಿದ್ದ ಒಂದುವರೆ ವರ್ಷ ಪ್ರಾಯ ಕಾವ್ಯ, ಮತ್ತು ನೆರೆಮನೆಯ ಶಿಲ್ಪಾಶ್ರೀ (10)ಗೆ ಸಿಡಿಲಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ರಾತ್ರಿ ಇದೇ ಮನೆಯಲ್ಲಿ ಔತಣಕೂಟ ನಡೆದಿದ್ದು, ಮನೆ ಮಂದಿ ಔತಣದ ಊಟ ಮಾಡಿ ಸುಖ ನಿದ್ರೆಯಲ್ಲಿದ್ದಾಗಲೇ ಈ ದುರಂತ ಸಂಭವಿಸಿದೆ.
ಮನೆಗೂ ಹಾನಿ: ಘಟನೆಯಿಂದಾಗಿ ಮನೆಯ ಗೋಡೆಯಲ್ಲಿ ಬಿರುಕು ಬಿಟ್ಟಿದ್ದು, ವಿದ್ಯುತ್ ವಯರಿಂಗ್ ಸುಟ್ಟು ಹೋಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ವಿಟ್ಲ ಪರಿಸರದಲ್ಲಿ ಧಾರಾಕಾರ ಮಳೆ: ಬುಧವಾರ ತಡರಾತ್ರಿ 2 ಗಂಟೆ ಬಳಿಕ ವಿಟ್ಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ಮಳೆಯಿಂದಾಗಿ ಶಾಲೆ ರಸ್ತೆಯಲ್ಲಿ ಮತ್ತು ಪುತ್ತೂರು ರಸ್ತೆಯಲ್ಲಿ ಕೊಳಚೆ ನೀರು ನಿಂತು ದುರ್ನಾತ ಬೀರುತ್ತಿತ್ತು.