ಶಿರಾಡಿ ಘಾಟಿ ರಸ್ತೆ ದುರಸ್ತಿ: ಸಚಿವಗೆ ಡಾ. ಹೆಗ್ಗಡೆ ಪತ್ರ
ಬೆಳ್ತಂಗಡಿ: ಹೊಂಡಗಳಿಂದ ತೀವ್ರ ಹದಗೆಟ್ಟಿರುವ ಶಿರಾಡಿ ಘಾಟಿ ರಸ್ತೆಯನ್ನು ರಿಪೇರಿ ಮಾಡುವಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ. ಮಹದೇಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಬಾರಿಯ ವಿಪರೀತ ಮಳೆಯಿಂದಾಗಿ ಮತ್ತು ಅಧಿಕ ಸಂಖ್ಯೆಯ ವಾಹನಗಳ ಓಡಾಟದಿಂದಾಗಿ ರಸ್ತೆಯು ಹದೆಗೆಟ್ಟಿದೆ. ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳ ನಿರ್ಮಾಣವಾಗಿರುವುದರಿಂದ ವಾಹನ ಸಂಚಾರ ತೀರ ಕಷ್ಟ ಸಾಧ್ಯವಾಗಿದೆ. ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ರಸ್ತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಂಗಳೂರಿನಿಂದ ಹಾಸನ ಮೂಲಕ ಬೆಂಗಳೂರು, ಮೈಸೂರಿಗೆ ಹೋಗುವ ವಾಹನಗಳೆಲ್ಲ ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ರಜಾ ದಿನಗಳಲ್ಲಿ ವಾಹನ ದಟ್ಟಣೆಯಿಂದಾಗಿ ಘಾಟಿ ರಸ್ತೆ ಆಗಾಗ ಬ್ಲಾಕ್ ಆಗುತ್ತದೆ. ಬೆಂಗಳೂರಿನಿಂದ ಜಿಲ್ಲೆಯ ಪವಿತ್ರ ಕ್ಷೇತ್ರಗಳಾದ ಧರ್ಮಸ್ಥಳ, ಉಡುಪಿ ಮತ್ತು ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಿಕರೆಲ್ಲ ಇದೇ ಘಾಟಿ ರಸ್ತೆಯ ಮೂಲಕ ಬರಬೇಕಾಗುತ್ತದೆ. ನ.28 ರಿಂದ ಡಿ.2ರವರೆಗೆ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ನಾಡಿನ ವಿವಿಧ ಊರುಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಧರ್ಮಸ್ಥಳವನ್ನು ಸಂಪರ್ಕಿಸುವ ಶಿರಾಡಿ ಘಾಟಿ ರಸೆಯ ದುರಸ್ತಿ ಬಗ್ಗೆ ಆದಷ್ಟು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.