'ಮತಾಂತರ ಕೇಂದ್ರಗಳಿಂದ ರಕ್ಷಿಸಿ'
ಮಂಗಳೂರು: ಹಿಂದೂ ಯುವತಿಯರನ್ನು ಲವ್‌ಜಿಹಾದ್ ಮೂಲಕ ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಹೇಳಿದರೂ ಸುಮ್ಮನಿದ್ದ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಶ್ರೀರಾಮ ಸೇನೆ ಹೇಳಿದೆ.
ಬಡ ಹಿಂದೂ ಹೆಣ್ಮಕ್ಕಳನ್ನು ಆಮಿಷ ತೋರಿಸಿ ಕೇರಳದ ಪೊನ್ನಾಣಿಗೆ ಕರೆದುಕೊಂಡು ಹೋಗಿ ಮತಾಂತರಗೊಳಿಸಿ ಉಗ್ರವಾದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆ ಮತಾಂತರ ಕೇಂದ್ರಗಳಿಗೆ ದಾಳಿ ಮಾಡಿ ಅಮಾಯಕ ಹೆಣ್ಮಕ್ಕಳನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಹಿಂದೂ ಸಮಾಜ ಇಂಥ ಕೇಂದ್ರಗಳಿಗೆ ದಾಳಿ ಮಾಡಿ ದ್ರೋಹಿಗಳನ್ನು ಶಿಕ್ಷಿಸಬೇಕಾದೀತು ಎಂದು ಶ್ರೀರಾಮ ಸೇನೆ ಜಿಲ್ಲಾ ಘಟಕ ಎಚ್ಚರಿಸಿದೆ. ಬಂಧಿತ ಉಗ್ರ ಯಾಸಿನ್ ಭಟ್ಕಳ್ ವಿಚಾರಣೆಯಲ್ಲಿ ಕರಾವಳಿಯ ಮುಸ್ಲಿಂ ಸಂಘಟನೆಗಳ ಜತೆ ನಿಕಟ ಸಂಪರ್ಕ ಇರುವುದನ್ನು ಒಪ್ಪಿಕೊಂಡಿದ್ದಾನೆ. ಅಂಥ ಸಂಘಟನೆಗಳ ಹೆಸರನ್ನು ಸರ್ಕಾರ ಬಹಿರಂಗಪಡಿಸಬೇಕು. ಸಂಘಟನೆ ನಾಯಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಆರ್.ಶೆಟ್ಟಿ ಆಗ್ರಹಿಸಿದ್ದಾರೆ.
ಜುಗಾರಿ: 7 ಮಂದಿ ಸೆರೆ
ಗಂಗೊಳ್ಳಿ: ಇಲ್ಲಿನ ತೌಹಿದ್ ಶಾಲೆ ಎದುರಿನ ಕಾಡಿನಲ್ಲಿ ಜುಗಾರಿ ಆಟ ಆಡುತ್ತಿದ್ದ 7 ಜನ ಆರೋಪಿಗಳನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಆಟಕ್ಕೆ ಉಪಯೋಗಿಸಿದ ರು. 5170 ಹಾಗೂ ಇನ್ನಿತ್ತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.