ವೈದ್ಯರ ದರೋಡೆ: ಇಬ್ಬರ ಬಂಧನ
ಉಡುಪಿ: ನ.9ರಂದು ಉಡುಪಿಗೆ ಬಂದಿದ್ದ ಮಂಗಳೂರಿನ ವೈದ್ಯರೊಬ್ಬರನ್ನು ದೋಚಿದ್ದ ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಉಡುಪಿಯಲ್ಲಿ ವಾಸವಾಗಿದ್ದ ಮಂಗಳೂರಿನ ಕೊಡಿಯಾಲಗುತ್ತು ನಿವಾಸಿ ಅಶ್ವಥ್ ಕುಮಾರ್ (22), ಕುಂದಾಪುರದ ಹಿಲಿಯಾಣ ಗ್ರಾಮದ ನಿವಾಸಿ ಉಮೇಶ್ ಕುಮಾರ್ (20) ಬಂಧಿತರು.
ನಗರದಲ್ಲಿ ನಡೆದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇಳನಕ್ಕೆ ಭಾಗವಹಿಸಲು ಬಂದ ಮಂಗಳೂರಿನ ಡಾ. ಅನಿಲ್ ಕುಮಾರ್ ಅವರನ್ನು ಮಂಗಳೂರಿಗೆ ಹೋಗಲು ಟ್ಯಾಕ್ಸಿ ಮಾಡಿ ಕೊಡುತ್ತೇನೆಂದು ಅಜ್ಜರಕಾಡು ಮೈದಾನದ ಬಳಿ ಕರೆದುಕೊಂಡು ಹೋಗಿ, ಅಲ್ಲಿ ಅವರನ್ನು ಬೆದರಿಸಿ ಚಿನ್ನದ ಉಂಗುರ, ಚಿನ್ನದ ಸರ, ನಗದು ಹಣ ಮತ್ತು ಎಟಿಎಂ ಕಾರ್ಡ್ ಇತ್ಯಾದಿಗಳನ್ನು ದೋಚಿದ ಬಗ್ಗೆ ನಗರ ಠಾಣೆಗೆ ದೂರು ಸಲ್ಲಿಸಿದ್ದರು.
ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸುಲಿಗೆ ಮಾಡಿದ ನಗದು ರು. 39,000, ರು. 15000 ಮೌಲ್ಯದ ಚಿನ್ನದ ಉಂಗುರ, ಕೃತ್ಯಕ್ಕೆ ಉಪಯೋಗಿಸಿದ ಬೈಕನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಎಸ್ಪಿ ಡಾ. ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ, ಉಡುಪಿ ವೃತ್ತ ನಿರೀಕ್ಷಕ ಮಾರುತಿ ಜಿ. ನಾಯಕ್ ಮತ್ತು ಪತ್ತೆ ದಳದ ಸಿಬ್ಬಂದಿಗಳಾದ ಥೋಮ್ಸನ್, ಕೃಷ್ಣಪ್ರಸಾದ್, ಸುಧೀರ್ ಹಾಗೂ ಮಹಾಬಲೇಶ್ವರ ಕಾರ್ಯಾಚರಣೆ ನಡೆಸಿದ್ದರು.