ಶಿಕ್ಷಣ, ಸಂಶೋಧನೆಗೆ ಹೇರಳ ಅನುದಾನ ಅಗತ್ಯ
ಮಂಗಳೂರು: ಭಾರತದಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಅನುದಾನ ನೀಡುವಲ್ಲಿ ಸರ್ಕಾರ ಹಿಂದೇಟು ಹಾಕಬಾರದು ಎಂದು ಅಮೆರಿಕಾ ಮಚಿಗಾನ್ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪ್ರೊ.ಸತೀಶ್ ಉಡುಪ ಹೇಳಿದ್ದಾರೆ.
ಸುರತ್ಕಲ್ ಎನ್ಐಟಿಕೆಯಲ್ಲಿ ಶನಿವಾರ ಘಟಿಕೋತ್ಸವದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ನಾಲ್ಕು ವರ್ಷದಿಂದ ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಕ್ಕೂ ತಟ್ಟಿದೆ. ಕಳೆದ ವರ್ಷ ಈ ಕ್ಷೇತ್ರಕ್ಕೆ 400 ಮಿಲಿಯನ್ ಡಾಲರ್ ನೀಡಿದ್ದರೆ, ಈ ವರ್ಷದ 520 ಮಿಲಿಯನ್ ಡಾಲರ್ ಬೇಡಿಕೆಯನ್ನು ಅಮೆರಿಕಾ ಸರ್ಕಾರ ಪೂರೈಸುತ್ತಿಲ್ಲ. 1980ರಲ್ಲಿ ಶೇ.67ರಷ್ಟು ಅನುದಾನ ನೀಡುತ್ತಿದ್ದರೆ, ಈಗ ಅದರ ಪ್ರಮಾಣ ಶೇ.8ಕ್ಕೆ ಕುಸಿದಿದೆ. ಭಾರತದಲ್ಲಿ ರಾಜ್ಯ ನಿಧಿಯಿಂದ ಈ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಬೇಕು ಎಂದು ಆಶಿಸಿದರು.
ಅಗ್ನಿ ನಿರೋಧಕ ತಾಂತ್ರಿಕತೆ: ಅಮೆರಿಕಾದ ಡಬ್ಲ್ಯೂಟಿಒ ಕಟ್ಟಡ ಹಾಗೂ ಮಹಾರಾಷ್ಟ್ರದ ಸಚಿವಾಲಯ ಬೆಂಕಿಗೆ ಆಹುತಿಯಾದ ಘಟನೆಯನ್ನು ತಾಂತ್ರಿಕ ತಂಡ ವಿಶ್ಲೇಷಿಸಿದ್ದು, ಅಗ್ನಿ ನಿರೋಧಕ ಕಟ್ಟಡ ನಿರ್ಮಿಸದಿರುವುದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಅಲ್ಲದೆ ಡಬ್ಲ್ಯೂಟಿಒ ಕಟ್ಟಡ ಕುರಿತು ಅಧ್ಯಯನ ನಡೆಸಿದ ತಾಂತ್ರಿಕ ಪರಿಣತ ತಂಡದ ಪ್ರಕಾರ, ಆ ಕಟ್ಟಡ ತಳಮಟ್ಟದಲ್ಲಿ ಅಗ್ನಿ ನಿರೋಧಕ ವ್ಯವಸ್ಥೆ ಹೊಂದಿರಲಿಲ್ಲ ಎಂದು ಗೊತ್ತಾಗಿದೆ. ಅಲ್ಲದೆ ಮಹಾರಾಷ್ಟ್ರ ಸಚಿವಾಲಯ ಅಗ್ನಿದುರಂತದಲ್ಲೂ ಅಗ್ನಿ ನಿರೋಧಕ ಕಟ್ಟಡ ವ್ಯವಸ್ಥೆ ರೂಪುಗೊಳ್ಳದಿರುವುದು ಕಾರಣ. ಇವೆಲ್ಲವನ್ನು ಅವಲೋಕಿಸಿ ಅಗ್ನಿ ನಿರೋಧಕ ಕಟ್ಟಡ ರೂಪಿಸಲು ಎನ್ಐಟಿಕೆ ಜತೆ ಮಚಿಗಾನ್ ವಿಶ್ವವಿದ್ಯಾಲಯ ಸಂಶೋಧನೆ ಕೈಗೊಳ್ಳುವುದು ಎಂದರು.
ಪೇಟೆಂಟ್ ಸೆಲ್ ಪ್ರಾರಂಭ: ಎನ್ಐಟಿಕೆ (ರಾಷ್ಟ್ರೀಯ ತಾಂತ್ರಿಕ ಸಂಸ್ಥೆ)ಯಲ್ಲಿ ಕಳೆದ ವರ್ಷದಿಂದ ಐಪಿಆರ್ ಸೆಲ್ ಪ್ರಾರಂಭವಾಗಿದ್ದು, ಈವರೆಗೆ ಕೆಮಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್, ಕೆಮಿಸ್ಟ್ರಿ ಸೇರಿದಂತೆ ಆರು ವಿಷಯಗಳಲ್ಲಿ ಪೇಟೆಂಟ್ ನೀಡಿದ್ದು, ಇನ್ನೂ ಐದು ವಿಷಯಗಳಲ್ಲಿ ಪೇಟೆಂಟ್ಗೆ ಅರ್ಜಿ ಬಂದಿದೆ ಎಂದು ಎನ್ಐಟಿಕೆ ನಿರ್ದೇಶಕ ಪ್ರೊ.ಸ್ವಪನ್ ಭಟ್ಟಾಚಾರ್ಯ ಹೇಳಿದರು.
ಎಲ್ಎನ್ಟಿ ಕಂಪನಿ ಜತೆಗಿನ ಒಪ್ಪಂದ ಪ್ರಕಾರ, 15 ಮಂದಿ ಎಲ್ಎನ್ಟಿ ಸಿಬ್ಬಂದಿ ಹಾಗೂ 15 ಮಂದಿ ಹೊರಗಿನ ವಿದ್ಯಾರ್ಥಿಗಳು ಎನ್ಐಟಿಕೆಯಲ್ಲಿ ತಾಂತ್ರಿಕ ಶಿಕ್ಷಣ ಪಡೆಯಲಿದ್ದಾರೆ. ಬಳಿಕ ಹೊರಗಿನ ವಿದ್ಯಾರ್ಥಿಗಳೂ ಎಲ್ಎನ್ಟಿ ಕಂಪನಿಯಲ್ಲಿ ಉದ್ಯೋಗ ನಿರ್ವಹಿಸಲಿದ್ದಾರೆ. ಒಂದು ವರ್ಷ ತರಗತಿ ಪಾಠ ಹಾಗೂ ಇನ್ನೊಂದು ವರ್ಷ ಪ್ರೋಜೆಕ್ಟ್ ಕೆಲಸ ಇರುತ್ತದೆ. 2014 ಶೈಕ್ಷಣಿಕ ವರ್ಷದಲ್ಲಿ ಈ ಕೋರ್ಸ್ ಪ್ರಾರಂಭವಾಗಲಿದೆ ಎಂದರು.
1486 ಮಂದಿಗೆ ಪದವಿ ಪ್ರದಾನ
ಎನ್ಐಟಿಕೆ 11ನೇ ಘಟಿಕೋತ್ಸವದಲ್ಲಿ ಒಟ್ಟು 1486 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅಮೆರಿಕಾ ಮಿಚಿಗಾನ್ ವಿವಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪ್ರೊ.ಸತೀಶ್ ಉಡುಪ ಪದವಿ ಪ್ರದಾನ ನೆರವೇರಿಸಿದರು. ಎನ್ಐಟಿಕೆ ಅಧ್ಯಕ್ಷ ಸುಶಿಲ್ ಚಂದ್ರ ತ್ರಿಪಾಠಿ, ನಿರ್ದೇಶಕ ಪ್ರೊ. ಸ್ವಪನ್ ಭಟ್ಟಾಚಾರ್ಯ ಹಾಜರಿದ್ದರು. 772 ಮಂದಿ ಬಿಟೆಕ್ ಪದವಿ, 493 ಮಂದಿ ಎಂಟೆಕ್, 88 ಮಂದಿ ಎಂಸಿಎ, 32 ಮಂದಿ ಎಂಬಿಎ, 39 ಮಂದಿ ಎಂಎಸ್ಸಿ, 62 ಮಂದಿ ಪಿಎಚ್ಡಿ ಹಾಗೂ 38 ಮಂದಿ ಶೈಕ್ಷಣಿಕ ಸಾಧನೆಗೆ ಚಿನ್ನದ ಪದಕ ಪಡೆದರು. ಇವರಲ್ಲಿ ಮೈಸೂರಿನ ಶ್ವೇತಾ ಪೈ 3 ಚಿನ್ನದ ಪದಕ ಹಾಗೂ ಉತ್ತರ ಪ್ರದೇಶದ ಮನೋಜ್ ಕುಮಾರ್ ಯಾದವ್ 4 ಚಿನ್ನದ ಪದಕ ಪಡೆದಿದ್ದಾರೆ.