ಜನವರಿಗೆ ದಾಖಲಾತಿ ಆರಂಭಿಸಿ, ತಪ್ಪಿದರೆ ಕ್ರಮ ಎದುರಿಸಿ
ಮಂಗಳೂರು: ಇಷ್ಟು ವರ್ಷದಿಂದ ತಮ್ಮಿಷ್ಟದಂತೆ ಅವಧಿಗೆ ಮುನ್ನವೇ ಮಕ್ಕಳ ಪ್ರವೇಶ ಪ್ರಕ್ರಿಯೆ ನಡೆಸುವ ಖಾಸಗಿ ಶಾಲೆಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
ಈ ವರ್ಷದಿಂದ ಯಾವುದೇ ಖಾಸಗಿ ಶಾಲೆಗಳು ಜನವರಿಗೆ ಮುನ್ನ ಶಾಲಾ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸುವಂತಿಲ್ಲ. ಹಾಗೇನಾದರೂ ಮಾಡಿದ್ದು ಕಂಡುಬಂದರೆ ಅಂಥ ಶಾಲೆಗಳ ವಿರುದ್ಧ ಸರ್ಕಾರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಎಲ್ಲ ಜಿಲ್ಲೆಗಳ ವಿದ್ಯಾಂಗ ಉಪನಿರ್ದೇಶಕರಿಗೆ ಜರೂರು ಸುತ್ತೋಲೆ (ನ.6ರಂದು) ಹೊರಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕದಲ್ಲಿ 2014-15ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಶೈಕ್ಷಣಿಕ ವರ್ಷಾಂತ್ಯ ಹತ್ತಿರ ಕೂಡ ಬಂದಿಲ್ಲ. ಈಗಲೇ ಪ್ರವೇಶ ಪ್ರಕ್ರಿಯೆಗೆ ಆನ್ಲೈನ್ನಲ್ಲಿ ಅರ್ಜಿ ಸ್ವೀಕರಿಸುವುದು, ಆಯ್ಕೆ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿವೆ.
ಮುಖ್ಯವಾಗಿ ಸಿಬಿಎಸ್ಇ/ಎಫ್ಸಿಎಸ್ಇ ಶಾಲೆಗಳಲ್ಲದೆ, ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಖಾಸಗಿ ಶಾಲೆಗಳಲ್ಲಿ ಸದ್ದಿಲ್ಲದೆ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಹೇರಳ ಡೊನೇಷನ್ ಬಾಚಲು ಕೈಚಾಚುತ್ತಿವೆ.
ನಿಯಮ ತಪ್ಪಿದರೆ ಕ್ರಮ: ಈ ವಿಚಾರ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದು, ದೂರು ಕೂಡ ಸ್ವೀಕರಿಸಿದೆ. ಇದನ್ನು ಗಂಭೀರ ಪರಿಗಣಿಸಿರುವ ಶಿಕ್ಷಣ ಇಲಾಖೆ, ಇದು ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್ 13ರ ನೇರ ಉಲ್ಲಂಘನೆಯಾಗಿದ್ದು, ಅಂಥ ಶಾಲೆಗಳ ದಿಢೀರ್ ತಪಾಸಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಅಥವಾ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ತಂಡ ದೂರು ಬಂದ ಅಥವಾ ಸಂಶಯಾಸ್ಪದ ಖಾಸಗಿ ಶಾಲೆಗಳಿಗೆ ದಿಢೀರನೆ ನೀಡಿ ಅವಧಿಗೆ ಮುನ್ನ ಪ್ರವೇಶ ಪ್ರಕ್ರಿಯೆ ನಡೆಸಿರುವುದನ್ನು ಪತ್ತೆ ಮಾಡಲಿದೆ. ನಂತರ ನಿಯಮಾನುಸಾರ ಶಾಲೆ ವಿರುದ್ಧ ಕ್ರಮ ಕೈಗೊಳ್ಳಲಿದೆ. ಅನುದಾನ ರಹಿತ ಅಲ್ಪಸಂಖ್ಯಾತ ಶಾಲೆ ಹೊರತುಪಡಿಸಿ ಬೇರೆಲ್ಲ ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ.
ಶೇ.25 ಸೀಟು ಮೀಸಲು: ಶಿಕ್ಷಣ ಇಲಾಖೆಯ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಜನವರಿಯಲ್ಲಿ ಪ್ರವೇಶ ಪ್ರಕ್ರಿಯೆ ಶುರುವಾಗಬೇಕು. ಮಕ್ಕಳ ಹಕ್ಕು ನಿಯಮ ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಅವಕಾಶ ನೀಡಬೇಕು.ಅಂದರೆ ಶೇ.25 ಉಚಿತ ದಾಖಲಾತಿ ನಡೆಯಬೇಕು.
ಅನಾಥ ಮಗು, ವಲಸೆ ಮಗು, ಬೀದಿ ಮಗು, ಅಂಗವಿಕಲ ಮಗು, ಎಚ್ಐವಿ ಪೀಡಿತ ಮಗುವಿಗೆ ಇದರಲ್ಲಿ ಅವಕಾಶ ನೀಡಬೇಕು.
ಆರ್ಥಿಕ ದುರ್ಬಲ ಮಕ್ಕಳ ಕುಟುಂಬ ಆದಾಯ ಮಿತಿ ರು. 3.50 ಲಕ್ಷ ವರೆಗೆ ಇದ್ದವರು ಅರ್ಜಿ ಸಲ್ಲಿಕೆಗೆ ಅರ್ಹರು. ದಾಖಲಾತಿ ವೇಳೆ ರು. 1 ಲಕ್ಷಕ್ಕಿಂತ ಕಡಿಮೆ ಕುಟುಂಬ ಆದಾಯಕ್ಕೆ ಮೊದಲ ಆದ್ಯತೆ. ಮೀಸಲು ಸೀಟಿಗಿಂತ ಜಾಸ್ತಿ ಮಕ್ಕಳಿದ್ದರೆ ಆಗ ಲಾಟರಿ ಮುಖೇನ ಆಯ್ಕೆ ಮಾಡಬೇಕು. ನಂತರವೂ ಮಕ್ಕಳು ಉಳಿದಿದ್ದರೆ ರು. 1 ರಿಂದ ರು. 3.50 ಲಕ್ಷ ವರೆಗಿನ ಕುಟುಂಬ ಆದಾಯ ಪರಿಗಣಿಸಬೇಕು.
ಜನವರಿಗೆ ಪ್ರಾರಂಭ: ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಶೇ.25 ಸೀಟು ನಿಗದಿಗೊಳಿಸಿ 2014 ಜ.6ರಂದು ಪ್ರಕಟಣೆ ಹೊರಡಿಸುವರು. ಮಕ್ಕಳ ದಾಖಲಾತಿಗೆ ಪೋಷಕರು ಶಾಲೆಗೆ ಅರ್ಜಿ ಸಲ್ಲಿಸಲು ಜ.7ರಿಂದ ಫೆ.8ರ ವರೆಗೆ ಅವಕಾಶವಿದೆ. ಫೆ.17ರಂದು ಅರ್ಜಿ ಪರಿಶೀಲನೆ ನಡೆಸಿ ಶಾಲೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಯ್ಕೆ ಪಟ್ಟಿ ಸಲ್ಲಿಸಬೇಕು. ಫೆ.28ರಂದು ಈ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಮೋದಿಸಿ ಶಾಲೆಗೆ ಕಳುಹಿಸುತ್ತಾರೆ. ಮಾರ್ಚ್ 3ರಂದು ದಾಖಲಾತಿ ಪ್ರಾರಂಭಗೊಳ್ಳುತ್ತದೆ.
ಆತ್ಮಭೂಷಣ್