ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮಕ್ಕೆ ಡಿಸಿಗೆ ಮನವಿ

Mainashree
Updated On : 18 Nov 2013, 11:58 am

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳಕನಕಾರಿಯಾಗಿ ಮಾತನಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಯಾನೆ ರವಿ ಶೆಟ್ಟಿ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮಂಗಳೂರಿನಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ವತಿಯಿಂದ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಮಾಜಿ ಸಚಿವ ಅಮರನಾಥ ಶೆಟ್ಟಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಕುಂಬ್ಳೆ ಸುಂದರ ರಾವ್, ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ನೇತೃತ್ವದಲ್ಲಿ ಶನಿವಾರ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ.
ಉಜಿರೆ ಕಾಲೇಜು ವಿದ್ಯಾರ್ಥಿನಿ ಹತ್ಯೆ ಪ್ರಕರಣ ಕುರಿತು ಧರ್ಮಸ್ಥಳ ಕ್ಷೇತ್ರದ ಗೌರವ, ಪಾವಿತ್ರ್ಯತೆ ಹಾಗೂ ಲಕ್ಷಾಂತರ ಭಕ್ತರ ನಂಬಿಕೆ ಹಾಳುಗೆಡಹುವ ರೀತಿಯಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬ್ಯಾನರ್ ಪ್ರದರ್ಶನ, ಬಹಿರಂಗ ಸಭೆಗಳಲ್ಲಿ ಹೇಳಿಕೆ ನೀಡುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು, ಮೃತ ವಿದ್ಯಾರ್ಥಿಯ ನಗ್ನ ಚಿತ್ರ ಪ್ರದರ್ಶಿಸುವ ಮತ್ತು ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವನ್ನು ಅವಹೇಳನ ಮಾಡುವ ಬ್ಯಾನರ್‌ನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು, ಸರ್ಕಾರದ ಪೊಲೀಸ್ ಮತ್ತು ಸಿಐಡಿ ಇಲಾಖೆಯ ತನಿಖಾ ವರದಿಯನ್ನು ಧಿಕ್ಕರಿಸುವಂತೆ ಮಾತನಾಡಿದ್ದಲ್ಲದೆ ಸಿಬಿಐ ತನಿಖೆಯಲ್ಲೂ ನಂಬಿಕೆ ಇಲ್ಲದ ರೀತಿಯಲ್ಲಿ ಕ್ರಾಂತಿಕಾರಕವಾದ ಮತ್ತು ಹಿಂಸೆ ಪ್ರಚೋದನೆ ನೀಡಿದ ಹೇಳಿಕೆಯ ದಾಖಲೆಗಳನ್ನು ಮನವಿ ಜತೆ ಸಲ್ಲಿಸಿದ್ದಾರೆ.
ನಿಯೋಗದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಧನಲಕ್ಷ್ಮೀ ಜನಾರ್ದನ್, ಪ್ರಕಾಶ್ ಶೆಟ್ಟಿ, ಉಜಿರೆ ಸುಂದರ ಗೌಡ, ತಿಮ್ಮಪ್ಪ ಗೌಡ ಬೆಳಾಲು, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯರಾದ ಪಡಂಗಡಿ ಭೋಜರಾಜ ಹೆಗ್ಡೆ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪ್ರಾಂಶುಪಾಲರಾದ ಡಾ.ದೇವರಾಜ್, ಡಾ.ಬಿ.ಕೆ.ರವೀಂದ್ರ, ಪ್ರೊ.ಎಂ.ರಾಮಚಂದ್ರ, ಕ್ರೆಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ ಜೈನ್, ರತ್ನಾಕರ ಜೈನ್, ಯುವ ಕಾಂಗ್ರೆಸ್ ಮುಂದಾಳು ಮಿಥುನ್ ರೈ, ನ್ಯಾಯವಾದಿ ಕೇಶವ ಬೆಳಾಲು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement