ಸಾರಿಗೆ ಕಾನೂನಿಗೆ ತಿದ್ದುಪಡಿ: ಆಸ್ಕರ್
ಮಂಗಳೂರಲ್ಲಿ ಐವರು ಕ್ರೈಸ್ತ ಸಾಧಕರಿಗೆ ರಚನಾ ಪ್ರಶಸ್ತಿ ಪ್ರದಾನ
ಮಂಗಳೂರು: ಅಂಗವಿಕಲರಿಗೆ ನೆರವಾಗುವ ನಿಟ್ಟಿನಲ್ಲಿ ಸಾರಿಗೆ ಕಾನೂನಿನಲ್ಲಿ ತಿದ್ದುಪಡಿಗೆ ಮುಂದಾಗಿದ್ದು, ಎಲ್ಲ ಬಸ್‌ಗಳಲ್ಲಿ ರ್ಯಾಂಪ್ ಅಳವಡಿಕೆಗೆ ರಾಷ್ಟ್ರೀಯ ನೀತಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಮಂಗಳೂರಿನ ಕೆಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ನಗರದ ಮಿಲಾಗ್ರಿಸ್ ಹಾಲ್‌ನಲ್ಲಿ ಭಾನುವಾರ ಐವರು ಸಾಧಕರಿಗೆ ರಚನಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಸ್ತೆ, ಕಟ್ಟಡಗಳಲ್ಲಿ ಅಂಗವಿಕಲರಿಗೆ ನೆರವಾಗಲು ಈಗಾಗಲೇ ರ್ಯಾಂಪ್‌ಗಳಿವೆ. ಅದೇ ರೀತಿ ಎಲ್ಲ ಸಾರಿಗೆ ವಾಹನಗಳಲ್ಲಿ ರ್ಯಾಂಪ್ ಕಡ್ಡಾಯ ಅಳವಡಿಸುವ ನಿಟ್ಟಿನಲ್ಲಿ ಈ ನಿಯಮ ಜಾರಿಗೆ ತರಲಾಗುವುದು ಎಂದು ಹೇಳಿದರು.
ಸಾಧಕರನ್ನು ಪ್ರಶಂಶಿಸಿದ ಆಸ್ಕರ್, ಅಂಗವಿಕಲರಾದರೂ ಉತ್ತಮ ಹಾಕಿ ಪಟುವಾಗಿ ಜಾಕ್ವೆಲಿನ್ ಕೊಲಾಸೊ ದೇಶಕ್ಕೆ ಗರಿಮೆ ಮೂಡಿಸಿದ್ದಾರೆ. ಅವರ ದಾರಿ ಇತರರಿಗೆ ಅನುಕರಣೀಯ ಎಂದು ಹೇಳಿದರು.
ಈ ಸಂದರ್ಭ ರಚನಾ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಭಾರತೀಯ ಮಾಜಿ ಹಾಕಿ ಆಟಗಾರ್ತಿ, ಸಾಮಾಜಿಕ ಕರ್ತೆ ಜಾಕ್ವಲಿನ್ ಕೊಲಾಸೊಗೆ, ಪ್ರೊ.ಎಡ್ಮಂಡ್ ಫ್ರಾಂಕ್(ಕೃಷಿ), ರೋಹನ್ ಮೊಂತೆರೊ(ಉದ್ಯಮ), ಡಾ.ಸ್ಟಾನಿಸ್ಲಸ್ ಎಫ್.ಡಿಸೋಜ (ವಿಜ್ಞಾನಿ), ಲಾರೆನ್ಸ್ ಮೆಂಡೋನ್ಸಾ (ಕೈಗಾರಿಕೋದ್ಯಮಿ) ಅವರಿಗೆ ಪ್ರದಾನ ಮಾಡಲಾಯಿತು.
ನಿಟ್ಟೆ ವಿವಿ ಉಪಕುಲಪತಿ ಪ್ರೊ.ಡಾ.ಎಂ. ಶಾಂತರಾಮ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೋ ಅತಿಥಿಯಾಗಿ ಪಾಲ್ಗೊಂಡಿದ್ದರು. ರಚನಾ ಪ್ರಶಸ್ತಿ ಸಮಿತಿ ಅಧ್ಯಕ್ಷ ಐವನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ರೊನಾಲ್ಡ್ ಗೋಮ್ಸ್, ಕಾರ್ಯದರ್ಶಿ ಜೋನ್ ಮೊಂತೆರೊ ಇದ್ದರು.