ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹೀಗೊಂದು ಡ್ರೈವಿಂಗ್ ಸ್ಕೂಲ್ ಕ್ರಾಂತಿ

Mainashree
Updated On : 18 Nov 2013, 11:58 am

ಮಂಗಳೂರು: ಬ್ರೋಕರ್ ಇಲ್ಲದೆ ನೇರವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಅತ್ಯಂತ ಅಪರೂಪ ಮತ್ತು ಪ್ರಯಾಸದ ಕೆಲಸ. ಈ ರೀತಿ ಲೈಸೆನ್ಸ್ ಪಡೆದವರು ರಾಜ್ಯದಲ್ಲಿಯೇ ವಿರಳಾತಿ ವಿರಳ.
 ಅದರಲ್ಲಿಯೂ ಆರ್‌ಟಿಒ ಅಧಿಕಾರಿಗಳಿಗೆ ಮಾಮೂಲಿ ನೀಡದೆ ಡ್ರೈವಿಂಗ್ ಸ್ಕೂಲ್ ನಡೆಸುವುದು ಅಸಾಧ್ಯ ಎಂಬ ಮಾತಿದೆ.
 ಆದರೆ ಮಂಗಳೂರಲ್ಲಿ ಲಂಚ ನೀಡದೆ ಚಾಲನೆ ತರಬೇತಿ ನೀಡುವ ಶಾಲೆ ಇದೆ. ಅಲ್ಲಿ ಹೋಗಿ ಲೈಸೆನ್ಸ್ ಪಡೆವವರಿಗೂ ಗಂಡೆದೆ ಬೇಕು. ಮಾಮೂಲಿ ಸಿಗದ ಹಿನ್ನೆಲೆಯಲ್ಲಿ ಚಾಲನೆ ಪರೀಕ್ಷೆಯಲ್ಲಿ ಫೇಲ್ ಆಗುವ ಮತ್ತು ಅಲೆದಾಟದ ಸಾಧ್ಯತೆ ಹೆಚ್ಚು!
 ಡ್ರೈವಿಂಗ್ ಸ್ಕೂಲ್‌ಗೆ ಚಾಲನೆ ತರಬೇತಿ ನೀಡುವುದಷ್ಟೇ ಕೆಲಸ. ಆದರೆ ಲೈಸೆನ್ಸ್ ನೀಡುವುದನ್ನೇ ಪ್ರಮುಖ ಕಾಯಕ ಆಗಿದೆ. ದ್ವಿಚಕ್ರ ವಾಹನ ಲೈಸೆನ್ಸ್ ಮಾಡುವಾಗ ಶೇ.90 ಮಂದಿ ಚಾಲನೆ ಗೊತ್ತಿರುತ್ತದೆ. ಡ್ರೈವಿಂಗ್ ಸ್ಕೂಲ್‌ನವರು ತರಬೇತಿ ಮತ್ತು ಲೈಸೆನ್ಸ್‌ಗೆ ರು. 1,800 ಪಡೆಯುತ್ತಾರೆ. ಒಂದು ತರಗತಿಗೆ 150 ಪಡೆಯುತ್ತಾರೆ.  
 'ಪರವಾನಗಿ ನೀಡಲು ಬೇಕಿರುವುದು ಕೇವಲ 430 ಮಾತ್ರ. ಬಾಕಿ ಉಳಿದ ಹಣ ಡ್ರೈವಿಂಗ್ ಸ್ಕೂಲ್‌ನವರಿಗೆ ಸಿಗುತ್ತದೆ ಎಂದರ್ಥವಲ್ಲ. ಮಂಗಳೂರಲ್ಲಿ 40 ಬ್ರೋಕರ್‌ಗಳಿದ್ದಾರೆ. ಪ್ರತಿ ಲೈಸೆನ್ಸ್‌ನಲ್ಲಿ 400ರಿಂದ 500 ಹೆಚ್ಚುವರಿ ಹಣವನ್ನು ಮಾಮೂಲು ರೂಪದಲ್ಲಿ ಬ್ರೋಕರ್‌ಗಳು ನೀಡುತ್ತಾರೆ' ಎನ್ನುತ್ತಾರೆ ಕದ್ರಿ ವಾಹನ ತರಬೇತಿ ಶಾಲೆಯ ಇನ್‌ಸ್ಟ್ರಕ್ಟರ್ ಸತೀಶ್.  
ಆದಷ್ಟು ಬೇಗ ಲೈಸೆನ್ಸ್ ಸಿಕ್ಕಿದರೆ ಸಾಕು ಎಂದು ಬಹುತೇಕ ಮಂದಿ ಕೇಳಿದ ತಕ್ಷಣ ಹಣ ನೀಡುತ್ತಾರೆ. ತಾವು ಲಂಚವನ್ನೇ ಕೊಡುವುದಿಲ್ಲ, ಲಂಚ ತೆಗೆದುಕೊಳ್ಳುವುದಿಲ್ಲ ಎಂಬ ಅಪರೂಪದ ವ್ಯಕ್ತಿಗಳು ಪರವಾನಗಿ ಪಡೆಯಲು ಹೋದರೆ ಪರೀಕ್ಷೆಯಲ್ಲಿ ಫೇಲ್ ಆಗುತ್ತಾರೆ, ಭಗೀರಥ ಪ್ರಯತ್ನ ಬಳಿಕ ಲೈಸೆನ್ಸ್ ಸಿಗುತ್ತದೆ.
 ಲಂಚ ನೀಡದೆ ಲೈಸೆನ್ಸ್ ನೀಡಲು ಹೋರಾಟ ನಡೆಸುತ್ತಿರುವ ತರಬೇತುದಾರ ಸತೀಶ್ ಹೇಳುವುದು ಹೀಗೆ:
 ನಾವು ಪ್ರತಿ ತಿಂಗಳಿಗೆ 100 ಮಂದಿಗೆ ಚಾಲನೆ ತರಬೇತಿ ನೀಡುತ್ತೇವೆ. ಆರ್‌ಟಿಒಗೆ ಹೋಗಿ ಲೈಸೆನ್ಸ್ ಪಡೆಯಬೇಕಿದ್ದರೆ ಮಾಸಿಕ 50 ಸಾವಿರ ಹೆಚ್ಚುವರಿ ಮಾಮೂಲಿ ಹಣ ನೀಡಬೇಕಾಗುತ್ತದೆ. ಆದರೆ ನಾನು ನಯಾ ಪೈಸೆ ಹೆಚ್ಚು ಪಡೆಯುವುದಿಲ್ಲ, ಲಂಚ ನೀಡುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ. ಆರಂಭದಲ್ಲಿ ಕಷ್ಟ ಅನುಭವಿಸಿದೆ. ಸತತ ಹೋರಾಟ ನಡೆಸಿದ್ದೇನೆ. ಆಗಾಗ ಇನ್‌ಸ್ಪೆಕ್ಟರ್‌ಗಳು ಲೈಸೆನ್ಸ್ ನೀಡುವಾಗ ಬೇಕೆಂದೇ ಫೇಲ್ ಮಾಡುತ್ತಾರೆ. ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದು, ಮೇಲಧಿಕಾರಿಗಳ ಗಮನಕ್ಕೂ ತರುವ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ಇತ್ತೀಚೆಗೆ ಕಿರುಕುಳ ನೀಡುವುದನ್ನು ಕಡಿಮೆ ಮಾಡಿದ್ದರು. ಆದರೆ ಹೊಸ, ಹೊಸ ಇನ್‌ಸ್ಪೆಕ್ಟರ್‌ಗಳು ಬರುವಾಗ ಸಮಸ್ಯೆ ಮರುಕಳಿಸುತ್ತದೆ ಎನ್ನುತ್ತಾರೆ.
 ನೇರವಾಗಿ ಲೈಸೆನ್ಸ್ ಮಾಡಲು ಹೋಗಿ ಫೇಲಾದ ಪ್ರವೀಣ್ ತಮ್ಮ ಗೋಳು ತೋಡಿಕೊಳ್ಳುವುದು ಹೀಗೆ: ತರಬೇತಿ ಪಡೆದ ಬಳಿಕ ವಾಮಂಜೂರಲ್ಲಿ ಆರ್‌ಟಿಒ ಇನ್‌ಸ್ಪೆಕ್ಟರ್ ಪರೀಕ್ಷೆ ಮಾಡಿದರು. ಪರೀಕ್ಷೆ ಮುಗಿದ ಬಳಿಕ ವಾಪಸ್ ಸರತಿ ಸಾಲಲ್ಲಿ ನಿಂತೆ. ಆಗ ಪಕ್ಕದಲ್ಲಿ ನಿಂತಿದ್ದವರು ನೀನು ಫೇಲ್ ಅಲ್ವಾ? ಎಂದರು. ಆಶ್ಚರ್ಯ, ಸಿಟ್ಟು ಒಟ್ಟಿಗೆ ಬಂತು. ನಿಮಗೆ ಹೇಗೆ ಗೊತ್ತು ಎಂದೆ, ನೀನು ಡೈರೆಕ್ಟಾಗಿ ಲೈಸೆನ್ಸ್ ಪಡೆಯಲು ಬಂದೆಯಲ್ವಾ. ಹೀಗಾಗಿ ನಿನ್ನನ್ನು ಫೇಲ್ ಮಾಡುತ್ತಾರೆ ಎಂದರು. ಇದರರ್ಥ ಲಂಚ ಕೊಟ್ಟರೆ ಮಾತ್ರ ಪಾಸ್ ಮಾಡುತ್ತಾರೆ ಎಂದು. ಆದ್ದರಿಂದ ನಾವು ನಾಲ್ಕು ಮಂದಿ ಸಂತ್ರಸ್ತರು ಮೇಲಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದರು.
 'ಹಿಂದೊಮ್ಮೆ ಇದೇ ರೀತಿ ಫೇಲ್ ಮಾಡಿದಾಗ ಆರ್‌ಟಿಒ ಬಳಿ ದೂರು ನೀಡಿದ್ದೆ. ಯುವತಿ ಸ್ಕೂಟರ್‌ನಲ್ಲಿ ಸಂಚಾರ ದಟ್ಟಣೆಯ ಎ.ಬಿ. ಶೆಟ್ಟಿ ವೃತ್ತ, ಬಸ್ ನಿಲ್ದಾಣದಲ್ಲಿ ತೆರಳುವಂತೆ ಹೇಳಿ ಹಿಂದೆ ಜೀಪ್‌ನಲ್ಲಿ ಆರ್‌ಟಿಒ ಬಂದರು. ಸರಿಯಾಗಿ ವಾಹನ ಚಲಾಯಿಸಿದ್ದನ್ನು ಕಣ್ಣೆದುರೇ ನೋಡಿದ ಅವರು ಕೆಳ ಹಂತ ಅಧಿಕಾರಿಗಳ ತಪ್ಪು ಪರೋಕ್ಷವಾಗಿ ಒಪ್ಪಿಕೊಂಡು, 8 ದಿನ ಬಳಿಕ ಲೈಸೆನ್ಸ್ ನೀಡಿದರು ಎಂದು ತರಬೇತುದಾರ ಸತೀಶ್ ಹೇಳುತ್ತಾರೆ.
ಲಂಚ ನೀಡದೆ ಲೈಸೆನ್ಸ್
2 ವರ್ಷ 8 ತಿಂಗಳಲ್ಲಿ 650 ಮಂದಿಗೆ ಲೈಸೆನ್ಸ್ ನೀಡಲು ನೆರವು ನೀಡಿದ್ದೇನೆ. ಯಾರಿಗೂ ಲಂಚ ನೀಡಿಲ್ಲ ಎನ್ನುತ್ತಾರೆ ತರಬೇತುದಾರ ಸತೀಶ್. ವಾಮಂಜೂರಲ್ಲಿ ಪರೀಕ್ಷೆ ನಡೆಸಬೇಕು. ಕೆಲ ಅಧಿಕಾರಿಗಳು ಕದ್ರಿ ಪಾರ್ಕ್ ಪ್ರದೇಶದಲ್ಲಿ ಘನವಾಹನಗಳ ಕಾಟಾಚಾರ ಪರೀಕ್ಷೆ ನಡೆಸುತ್ತಾರೆ ಎಂದು ಆರೋಪಿಸುತ್ತಾರೆ.

 ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement