ಇಬ್ಬರು ವಿದ್ಯಾರ್ಥಿಗಳು ಸಾವು
ಕುಶಾಲನಗರ: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆಂದು ಕಾರಿನಲ್ಲಿ ಆಗಮಿಸುತ್ತಿದ್ದ ಸಂದರ್ಭ ಲಾರಿಯೊಂದಕ್ಕೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು ಮತ್ತಿಬ್ಬರು ತೀವ್ರ ಗಾಯಗೊಂಡ ಘಟನೆ ಕುಶಾಲನಗರ ಬಳಿ ನಡೆದಿದೆ.
ಮಡಿಕೇರಿ ಕುಶಾಲನಗರ ರಸ್ತೆಯ ಆನೆಕಾಡು ಬಳಿ ಸೋಮವಾರ ಮುಂಜಾನೆ ವೇಳೆಗೆ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್ ಬಳಿಯ ಕೈಕಂಬ ಗ್ರಾಮದ ನಾಲ್ವರು ಯುವಕರಲ್ಲಿ ಖಲಂಧರ್ (21) ಸ್ವಭೀರ್ (21) ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವ್ಯಾಪಾರಿ ಮಹಮ್ಮದ್ ಶಫ್ವಾನ್ (18) ಮತ್ತು ಶಫ್ವಾನ್ (18) ಎಂಬವರು ಅಪಘಾತದಿಂದ ತೀವ್ರ ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದರಲ್ಲಿ ಶಫಾನ್ ಸ್ಥಿತಿ ಚಿಂತಾಜನಕವಾಗಿದ್ದು, ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪುತ್ತೂರಿನಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಕಾರು ಮತ್ತು ಕುಶಾಲನಗರದಿಂದ ಹೊಸಕೋಟೆ ಕಡೆಗೆ ತೆರಳುತ್ತಿದ್ದ ಲಾರಿ ಆನೆಕಾಡು ಅರಣ್ಯ ಡಿಪ್ಪೋ ಬಳಿ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು, ಕಾರು ಚಾಲಾಯಿಸುತ್ತಿದ್ದ ಸ್ವಭೀರ್ ಕಾರಿನೊಳಗೆ ಸಿಲುಕಿ ಮೃತಪಟ್ಟರೆ, ಇನ್ನೋರ್ವ ಯುವಕ ಖಲಂಧರ್ ಕೂಡ ಸ್ಥಳದಲ್ಲಿಯೇ ಕೊನೆ ಉಸಿರೆಳೆದಿದ್ದಾನೆ.
ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಳಿ ಕೈಕಂಬದವರಾದ ಇವರೆಲ್ಲಾ ಪುತ್ತೂರಿನ ತಮ್ಮ ಸ್ನೇಹಿತರೊಬ್ಬರ ಕಾರಿನಲ್ಲಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಆಗಮಿಸುತ್ತಿದ್ದರು. ಭಾನುವಾರ ರಾತ್ರಿ 11 ಗಂಟೆಗೆ ಪುತ್ತೂರಿನಿಂದ ಹೊರಟ ಯುವಕರು ರಾತ್ರಿ ಚಾಲನೆ ಮಾಡಿ ಬೆಳಗ್ಗಿನ ಜಾವ ಕುಶಾಲನಗರ ಕಡೆಗೆ ಬರುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಚಾಲಕ ಅತಾವುಲ್ಲಾ ಕುಶಾಲನಗರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಅತಿ ವೇಗದ ಚಾಲನೆ ಘಟನೆಗೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಶಾಲನಗರ ಡಿವೈಎಸ್ಪಿ ನಾಗಪ್ಪ, ವೃತ್ತ ನಿರೀಕ್ಷಕ ಸಂದೇಶ್ ಕುಮಾರ್, ಠಾಣಾಧಿಕಾರಿ ಚಿಕ್ಕಸ್ವಾಮಿ, ಎ.ಎಸ್.ಐ.ಐ.ಎಸ್. ಅಯ್ಯಪ್ಪ, ಸ್ಥಳೀಯ ಸಂಚಾರಿ ಪೊಲೀಸರು ಮತ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಕ್ರಮ ಕೈಗೊಂಡರು. ಲಾರಿ ಚಾಲಕ ಅತಾವುಲ್ಲಾ ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡು ಕುಶಾಲನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.