ಜೈಲು ವಾರ್ಡನ್ ಜೈಲು ಪಾಲು!
ಉಡುಪಿ: ಜೈಲು ಕಾಯುವ ಜೈಲು ವಾರ್ಡನ್ ಜೈಲು ಪಾಲಾದ ಘಟನೆ ಇದು!
ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಅನಾರೋಗ್ಯಪೀಡಿತರಾಗಿದ್ದ ವಿಚಾರಣಾಧೀನ ಕೈದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ರು. 5 ಸಾವಿರ ಲಂಚ ಕೇಳಿದ್ದ ಜೈಲು ವಾರ್ಡನ್ ಸುರೇಶ್ ಬಾಬುಗೆ 3 ವರ್ಷ ಜೈಲುವಾಸ, ರು. 4 ಸಾವಿರ ದಂಡ ವಿಧಿಸಲಾಗಿದೆ.
ಪ್ರಕರಣ ಹಿನ್ನೆಲೆ: 2011ರ ಮಾರ್ಚ್ನಲ್ಲಿ ಕುಂದಾಪುರ ತಾಲೂಕಿನ ಮರವಂತೆಯ ನಿವಾಸಿ ನವೀನ್ ಚೆನ್ನಯ್ಯ ಎಂಬವರ ಲಾರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಎಂಬಾತ ಕ್ರಿಮಿನಲ್ ಪ್ರಕರಣವೊಂದರಲ್ಲಿ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಅವರನ್ನು ವೈದ್ಯಕೀಯ ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು ಉಡುಪಿ ಜಿಲ್ಲಾ ಕಾರಾಗೃಹದ ಜೈಲ್ ವಾರ್ಡನ್ ಸುರೇಶ್ ಬಾಬು ರು. 5 ಸಾವಿರ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ನವೀನ್ ಚೆನ್ನಯ್ಯ ಉಡುಪಿ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ದೂರಿನಂತೆ ಆಗಿನ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಸಿ.ಇ. ತಿಮ್ಮಯ್ಯ ಅವರು ವಾರ್ಡನ್ ಸುರೇಶ್ ಬಾಬು ಹಣ ಸ್ವೀಕರಿಸುವ ಸಂದರ್ಭ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಿದ್ದರು. ನಂತರ ಡಿಸೆಂಬರ್ನಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ಪ್ರಕರಣ ವಿಚಾರಣೆಗೊಳಪಟ್ಟು, ಲೋಕಾಯುಕ್ತದ ವಿಶೇಷ ಸರ್ಕಾರಿ ಅಭಿಯೋಜಕ ಭಾಸ್ಕರ ಹೆಗ್ಡೆ ಸರ್ಕಾರದ ಪರವಾಗಿ ವಾದಿಸಿದ್ದರು.
ಪ್ರಕರಣ ಸಾಬೀತಾಗಿ, ನ.16ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶ ಬಿ.ಎಂ. ಅಂಗಡಿ ಜೈಲರ್ ಸುರೇಶ್ಬಾಬುಗೆ 3 ವರ್ಷ ಜೈಲು ಶಿಕ್ಷೆ ಹಾಗೂ ರು. 4 ಸಾವಿರ ದಂಡ ವಿಧಿಸಿದ್ದಾರೆ.
ದಂಡ ತೆರಲು ತಪ್ಪಿದಲ್ಲಿ 4 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ.