ನಂದಿನಿಗೆ ಕಟೀಲು ಭೋಜನಶಾಲೆ, ಹೊಟೇಲ್ ತ್ಯಾಜ್ಯ!
ಮಂಗಳೂರು: ಸರ್ಕಾರದ ಕೈಗೆ ಪುಣ್ಯಕ್ಷೇತ್ರ ನೀಡಿದರೆ ಹೇಗೆ ನಿರ್ವಹಿಸುತ್ತದೆ ಎಂಬುದಕ್ಕೆ ಕಟೀಲು ಜ್ವಲಂತ ಉದಾಹರಣೆ! ದೇವಸ್ಥಾನ ಭೋಜನ ಶಾಲೆ, ಹೊಟೇಲ್ಗಳ ತ್ಯಾಜ್ಯ ನೀರು ಪವಿತ್ರ ನಂದಿನಿ ನದಿಗೆ ಬಿಡಲಾಗುತ್ತಿದೆ!
ದೇವಸ್ಥಾನ ಟ್ರಸ್ಟಿಗಳು, ಆಡಳಿತಾಧಿಕಾರಿಗಳು 1994ರಿಂದ ಎಷ್ಟೇ ಪ್ರಯತ್ನ ಪಟ್ಟರೂ, ಖರ್ಚು ಭರಿಸುತ್ತೇವೆ ಎಂದರೂ ಇಂದಿಗೂ ತ್ಯಾಜ್ಯ ನಂದಿನಿಯ ತೆಕ್ಕೆಯಲ್ಲಿ ಹರಿಯ ಬಿಡಲಾಗುತ್ತದೆ.
ದೇವಸ್ಥಾನದ ವಸತಿಗೃಹ ತ್ಯಾಜ್ಯ ನಿರ್ವಹಣೆಗೆ ಹೊಂಡ ತೋಡಿ ಪಿಟ್ ನಿರ್ಮಿಸಲಾಗಿದೆ. ಆದರೆ ಭೋಜನಶಾಲೆಯ ತ್ಯಾಜ್ಯ ನಂದಿನಿ ನದಿಗೆ ಬಿಡಲಾಗುತ್ತಿದೆ.
ಈ ಬಗ್ಗೆ ಮಂಗಳೂರು ಜಿಲ್ಲಾ ಪಂಚಾಯ್ತಿ ಸದಸ್ಯ ಈಶ್ವರ ಕಟೀಲ್, ಸಂಸದ ನಳಿನ್ ಕುಮಾರ್ ಕಟೀಲ್ ವಿರೋಧ ಭಾರಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ತುಳಸಿಮದ್ದಿನೇನಿ ಕಟೀಲ್ ವಸತಿಗೃಹ ಮತ್ತು ಅನ್ನಛತ್ರ ಬಂದ್ ಮಾಡಲು ದಾಳಿ ಮಾಡುವ ಬೆದರಿಕೆ ಕೂಡಾ ಹಾಕಿದರು. ದೇವಸ್ಥಾನ ಕಡೆಯಿಂದ ಯಾವ ತಪ್ಪೂ ನಡೆದಿಲ್ಲ, ಸರ್ಕಾರಿ ಇಲಾಖೆಗಳ ನಿಷ್ಕ್ರಿಯದಿಂದಾಗಿ ಇದೆಲ್ಲ ನಡೆದಿದೆ ಎಂಬುದುನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ಗೆ ಆಡಳಿತ ಮಂಡಳಿಯವರು ಮನವರಿಕೆ ಮಾಡಿದರು.
ಸಚಿವರು ಜಿಲ್ಲಾಧಿಕಾರಿ ಪ್ರಕಾಶ್ಗೆ ಮಾತನಾಡಿದರು, ಅವರು ಜಿಲ್ಲಾ ಪಂಚಾಯ್ತಿ ಸಿಇಒ ತುಳಸಿಮದ್ದಿನೇನಿಗೆ ದಾಳಿ ಮಾಡದಂತೆ, ನೋಟಿಸ್ ನೀಡಿ ನಿಯಮ ಪ್ರಕಾರ ಮುಂದುವರಿಯುವಂತೆ ಸಲಹೆ ಮಾಡಿದರು. ಕಟೀಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ್ದರಿಂದ ಹೊಟೇಲ್ಗಳಿಗೆ ಪಂಚಾಯ್ತಿ ನೋಟಿಸ್ ನೀಡಿತು, ದೇವಸ್ಥಾನ ಆಡಳಿತಾಧಿಕಾರಿ ಕೆಎಎಸ್ ಗ್ರೇಡ್ ಆದ್ದರಿಂದ ಜಿಲ್ಲಾ ಪಂಚಾಯ್ತಿಯಿಂದ ದೇವಸ್ಥಾನಕ್ಕೆ ನೋಟಿಸ್ ನೀಡಲಾಯಿತು. 'ತ್ಯಾಜ್ಯ ಸಂಗ್ರಹ ಮಾಡಿ, ನೀರನ್ನು ಶುದ್ಧಿಕರಿಸುವ ಎಸ್ಟಿಪಿ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ತಾಂತ್ರಿಕ ಅನುಮೋದನೆ ಲಭಿಸಿದೆ. ಮೊದಲ ಹಂತದ ರು. 45 ಲಕ್ಷ ಯೋಜನೆ ಸಿದ್ಧವಾಗಿದ್ದು, ಅನುಮತಿಗೆ ಧಾರ್ಮಿಕ ದತ್ತಿ ಇಲಾಖೆಗೆ ಕಳುಹಿಸಲಾಗಿದೆ' ಎಂದು ಆಡಳಿತಾಧಿಕಾರಿ ಅಜಿತ್ಕುಮಾರ್ ಹೆಗ್ಡೆ ಶಾನಾಡಿ ತಿಳಿಸಿದ್ದಾರೆ.
'ಇದುವರೆಗೆ ದೇವಸ್ಥಾನ ಕಡೆಯಿಂದ ನಿರ್ಲಕ್ಷ್ಯ ಆಗಿಲ್ಲ. 6 ತಿಂಗಳ ಒಳಗೆ ಯೋಜನೆ ಪೂರ್ಣಗೊಳ್ಳಲಿದೆ' ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ನೋಟಿಸ್ಗೆ ಆಡಳಿತಾಧಿಕಾರಿ ಉತ್ತರ ನೀಡಿದ್ದಾರೆ.
ದೇಗುಲದ ಭಗೀರಥ ಪ್ರಯತ್ನ..
1994ರಲ್ಲಿ ದೇವಸ್ಥಾನ ವತಿಯಿಂದ ಕಟೀಲ್ ಊರಿಗೆ ಒಳಚರಂಡಿಗೆ ವ್ಯವಸ್ಥೆ ನಿರ್ವಹಣೆಗೆ 55 ಲಕ್ಷ ಯೋಜನೆ ರೂಪಿಸಿ ಜಿಪಂಗೆ ಸಲ್ಲಿಸಲಾಯಿತು. ದೇವಸ್ಥಾನದಿಂದ 15 ಲಕ್ಷ ನೀಡಲು ಒಪ್ಪಿತ್ತು. ಆದರೆ ಕಡತ ಸರ್ಕಾರಿ ಇಲಾಖೆ ಮೇಜ್ಗಳಲ್ಲೇ ಕಳೆದುಹೋಯಿತು.
2004ರಲ್ಲಿ ದೇವಸ್ಥಾನ ಆಡಳಿತ ಮಂಡಳಿ ಟ್ರಸ್ಟಿಗಳಾದ ಗಣನಾಥ ಶೆಟ್ಟಿ ಮತ್ತು ಲಕ್ಷ್ಮೀನಾರಾಯಣ ಆಸ್ರಣ್ಣರು, ಆಡಳಿತಾಧಿಕಾರಿ ಪ್ರಭಾಕರ ಶರ್ಮ ಒಟ್ಟುಗೂಡಿ ಜಿಲ್ಲಾ ಪಂಚಾಯ್ತಿ ಮಾಡದಿದ್ದರೆ ದೇವಸ್ಥಾನ ವತಿಯಿಂದಲೇ ತ್ಯಾಜ್ಯ ನಿರ್ವಹಣೆ ಮಾಡಲು ಮುಂದಾದರು.
ಇದಕ್ಕಾಗಿ ಒಳಚರಂಡಿ ಮಂಡಳಿಗೆ 50 ಸಾವಿರ ಪಾವತಿಸಿ, ಪುನಃ ಅಂದಾಜು ಪಟ್ಟಿ ತಯಾರಿಸಿದರು. ಅಂದಾಜು ವೆಚ್ಚ 3.74 ಲಕ್ಷಕ್ಕೇರಿತು. ಶೇ.50 ದೇವಸ್ಥಾನ ವತಿಯಿಂದ ಉಳಿದದ್ದು ಸರ್ಕಾರ ಭರಿಸುವಂತೆ ಕೋರಿದರು. ಸರ್ಕಾರ ಸ್ಪಂದಿಸಲಿಲ್ಲ. 2008ಕ್ಕೆ ಅಂದಾಜುಪಟ್ಟಿ 7.1 ಕೋಟಿಗೆ ಮುಟ್ಟಿತು. ಆಗ ಮುಖ್ಯಮಂತ್ರಿ ಬಿಎಸ್ವೈ ಮತ್ತು ಮುಜರಾಯಿ ಸಚಿವ ವಿಎಸ್. ಆಚಾರ್ಯ ಸಭೆ ಮಾಡಿದರು. ಈ ಯೋಜನೆಯಲ್ಲಿ ತಾಂತ್ರಿಕ ಸಮಸ್ಯೆ ಇದೆ, ಪ್ರತ್ಯೇಕ ಯೋಜನೆ ಮಾಡುವಂತೆ ಹೇಳಿದರು. ಅದರಂತೆ 7.1 ಕೋಟಿ ಒಳಚರಂಡಿಗೆ, 8.55 ಕೋಟಿ ನೀರು ಸರಬರಾಜು ಯೋಜನೆ ಅಂದಾಜುಪಟ್ಟಿ ತಯಾರಿಸಲಾಯಿತು. ಕೆಲಸ ಮಾತ್ರ ಆಗಲಿಲ್ಲ. 2011ರಲ್ಲಿ ಉಪಮುಖ್ಯಮಂತ್ರಿ ಈಶ್ವರಪ್ಪ ಮತ್ತೆ ಸಭೆ ಕರೆದು, 7.1 ಕೋಟಿ ದೇವಸ್ಥಾನ ನೀಡಬೇಕು, 8.55 ಕೋಟಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಭರಿಸಬೇಕು ಎಂದರು. ದೇವಸ್ಥಾನದವರು ಒಪ್ಪಿದರು. ಇನ್ನೇನು ಕಾಮಗಾರಿ ಆಗುತ್ತದೆ ಎಂದಾಗ ಬಿಜೆಪಿ ಸರ್ಕಾರ ಅಧಿಕಾರ ಮುಗಿದು ಹೋಗಿತ್ತು. ಕಾಂಗ್ರೆಸ್ ಸರ್ಕಾರ ಬಂತು, ಅನುಮತಿ ಬಂದಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆ ದೇವಸ್ಥಾನದವರೇ ಮಾಡಿಕೊಳ್ಳಬೇಕು ಎಂದು ಪತ್ರ ಬರೆಯಿತು.
ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಜು.31ರಂದು ದೇವಸ್ಥಾನ ಆಡಳಿತ ಮಂಡಳಿ ತಾವೇ ತ್ಯಾಜ್ಯ ನಿರ್ವಹಣೆಗೆ ನಿರ್ಣಯ ಮಾಡಿತು. ಇದೀಗ ಟೆಂಡರ್ ಹಂತದಲ್ಲಿದೆ. ಈ ನಡುವೆ ಬಿಜೆಪಿ ಜನಪ್ರತಿನಿಧಿಗಳು ಸರ್ಕಾರ ವಿರುದ್ಧ ತೊಡೆ ತಟ್ಟಲು ಶುರು ಮಾಡಿದ್ದಾರೆ.
ಜಿತೇಂದ್ರ ಕುಂದೇಶ್ವರ