ಬಾಲಕಿ ಅತ್ಯಾಚಾರ: ನ್ಯಾಯಾಂಗ ಬಂಧನ
ಸುಳ್ಯ: ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇರೆಗೆ ಸುಳ್ಯ ಪೊಲೀಸರು ಯುವಕನನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಅಜ್ಜಾವರ ಗ್ರಾಮದ ಹೊಸಗದ್ದೆಯವಳಾದ ಬಾಲಕಿ ಸುಳ್ಯ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಅದೇ ಊರಿನ ಮಾಣಿ ಎಂಬವರ ಮಗ ಭವಾನಿಶಂಕರ ಎಂಬಾತ ನ. 2ರಂದು ಮಧ್ಯಾಹ್ನ ಆಕೆಯ ಮನೆಗೆ ಹೋಗಿ ಅತ್ಯಾಚಾರವೆಸಗಿದ್ದ. ಈ ಘಟನೆಯನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಇತ್ತೀಚೆಗೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಕೆ ಶಾಲೆಯ ಶಿಕ್ಷಕಿಯೊಂದಿಗೆ ಹೊಟ್ಟೆ ನೋವಿನ ವಿಷಯ ತಿಳಿಸಿದ್ದು, ಶಿಕ್ಷಕಿ ವಿದ್ಯಾರ್ಥಿನಿಯನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಆಸ್ಪತ್ರೆಯಲ್ಲಿ ವೈದ್ಯರು ಆಕೆಯನ್ನು ಪ್ರಶ್ನಿಸಿದಾಗ ಅತ್ಯಾಚಾರ ನಡೆಸಿರುವ ವಿಷಯ ಬೆಳಕಿಗೆ ಬಂದಿದೆ. ಬಳಿಕ ವಿದ್ಯಾರ್ಥಿನಿಯ ಮನೆಯವರು ಸುಳ್ಯ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ವಿಚಾರಣೆ ನಡೆಸಿದಾಗ ಆತ ಅತ್ಯಾಚಾರ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.