ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಪರಾಧ ಸುದ್ದಿ

Mainashree
Updated On : 20 Nov 2013, 12:20 pm

ಬೈಕ್- ಕಾರು ಡಿಕ್ಕಿ: ಸವಾರ ಗಂಭೀರ
ವಿಟ್ಲ: ನೆಟ್ಲಮೂಡ್ನೂರು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಬೈಕ್ ಹಾಗೂ ಟವೆರಾ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಗೋಳ್ತಮಜಲು ಗ್ರಾಮದ ಗುಂಡಿಮಜಲು ನಿವಾಸಿ ಭಾಸ್ಕರ ಗೌಡ (38) ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರಿನಿಂದ ಮಾಣಿ ಕಡೆ ತೆರಳುತ್ತಿದ್ದ ಬೈಕ್ ಹಾಗೂ ಮಂಗಳೂರು ಕಡೆಯಿಂದ ಆಗಮಿಸುತ್ತಿದ್ದ ಟವೆರಾ ಕಾರು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಭಾಸ್ಕರ ಗೌಡ ಅವರ ಕಾಲು ಮುರಿತಕ್ಕೊಳಗಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರದಿಂದ ಬಿದ್ದು ವ್ಯಕ್ತಿ ಸಾವು
ವಿಟ್ಲ: ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ಸೋಮವಾರ ನಡೆದಿದೆ. ಕನ್ಯಾನ ಗ್ರಾಮದ ಅಂಗ್ರಿ ನಿವಾಸಿ ಹಿಲೇರಿ ಡಿಸೋಜ (35) ಮೃತರು. ಅವರು ಅಡಕೆ ತೆಗೆಯುವ ಕೆಲಸ ಮಾಡುತ್ತಿದ್ದರು. ಸೋಮವಾರ ಕನ್ಯಾನ ಸಮೀಪದ ಫಾಹುಲ್ ಡಿಸೋಜ ಎಂಬವರ ಮನೆಯಲ್ಲಿ ಮರದ ರೆಂಬೆ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದಿದ್ದರು. ಬಳಿಕ ಸ್ಥಳೀಯರು ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೊಳ್ನಾಡು: ವಿಷ ಸೇವಿಸಿದ್ದ ಮಹಿಳೆ ಸಾವು
ವಿಟ್ಲ: ಔಷಧಿ ಎಂದು ತಪ್ಪಾಗಿ ತಿಳಿದು ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ ಲಲಿತಾ (60) ಮೃತರು. ಅವರು ಕಳೆದ ಹಲವು ಸಮಯಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ನ.15ರಂದು ತನ್ನ ಮನೆಯಲ್ಲಿ ಔಷಧಿ ಎಂದು ಭಾವಿಸಿ ತರಕಾರಿ ಗಿಡಗಳಿಗೆ ಬಿಡುವ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಳಿ ಕದ್ದಾತ ಮೊಬೈಲ್‌ಗಾಗಿ ಠಾಣೆಗೆ ಹಾಜರ್
ಉಪ್ಪಿನಂಗಡಿ: ಕೋಳಿ ಕದ್ದು ಸಿಕ್ಕಿ ಬಿದ್ದ ಕಳ್ಳನೋರ್ವ ಬಳಿಕ ಕೊಸರಾಡಿ ಪರಾರಿಯಾಗಿದ್ದರೂ ಮೊಬೈಲ್ ಸೆಳೆತದಿಂದಾಗಿ ಠಾಣೆಗೆ ಹಾಜರಾದ ಘಟನೆ ಆಲಂಕಾರಿನಲ್ಲಿ ನಡೆದಿದೆ. ನ.18ರಂದು ರಾತ್ರಿ ಆಲಂಕಾರಿನ ಚಿಕನ್ ಸೆಂಟರ್‌ವೊಂದರಿಂದ ನಾಟಿಕೋಳಿಯೊಂದನ್ನು ಮನೋಹರ ಎಂಬಾತ ಕದಿಯುವ ವೇಳೆ ಕೋಳಿಯ ಆಕ್ರಂದನ ಕೇಳಿ ಸ್ಥಳೀಯ ವ್ಯಕ್ತಿಯೊಬ್ಬರು ಕಳ್ಳನನ್ನು ಹಿಡಿದಿದ್ದರು. ಆದರೆ, ಕಳ್ಳ ಕೊಸರಾಡಿಕೊಂಡು ಹಿಡಿತದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಕೊಸರಾಟದ ವೇಳೆ ಆತನ ಮೊಬೈಲ್ ಕೆಳಗೆ ಬಿದ್ದಿತ್ತು. ಈ ಮೊಬೈಲ್ ಆಧಾರದಲ್ಲಿ ಕಳ್ಳನ ಜಾಡು ಹಿಡಿದ ಪೊಲೀಸರು ಕಳ್ಳನನ್ನು ಮೊಬೈಲ್ ಪಡೆದುಕೊಂಡು ಹೋಗುವ ಸಲುವಾಗಿ ಠಾಣೆಗೆ ಬರಲು ಹೇಳಿದ್ದಾರೆ. ಮೊಬೈಲ್ ಸೆಳೆತಕ್ಕೆ ಸಿಕ್ಕಿ ಕಳ್ಳ ಮಂಗಳವಾರ ಠಾಣೆಗೆ ಬಂದ ಕೂಡಲೇ ಆತನನ್ನು ಕೋಳಿ ಕಳವು ಯತ್ನದ ಬಗ್ಗೆ ವಿಚಾರಿಸಿದ್ದಾರೆ. ಮುಂದಕ್ಕೆ ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದೆಂದು ಎಚ್ಚರಿಸಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎನ್ನಲಾಗಿದೆ.
ಮನೆಗೆ ನುಗ್ಗಿ ಹಲ್ಲೆ ಯತ್ನ: ಥಳಿತ
ಬಂಟ್ವಾಳ: ಮನೆಗೆ ನುಗ್ಗಿ ಮನೆ ಮಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿ, ಕೊಲೆ ಬೆದರಿಕೆಯೊಡ್ಡಿದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ಸಂಜೆ ಕಾವಳಕಟ್ಟೆ ಸಮೀಪದ ಎನ್ಸಿ ರೋಡ್‌ನಲ್ಲಿ ನಡೆದಿದೆ. ಆರೋಪಿಯನ್ನು ಮೋಹನದಾಸ ಕೊಟ್ಟಾರಿ ಸಜೀಪ ಮುನ್ನೂರು ಎಂದು ಹೆಸರಿಸಲಾಗಿದ್ದು, ಆತನನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಬೈಕ್, ಚೂರಿ ಹಾಗೂ ಮದ್ಯದ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ. ಸೋಮವಾರ ಸಂಜೆ ವೇಳೆ ಮೋಹನದಾಸ ಕೊಟ್ಟಾರಿ ಎನ್ಸಿ ರೋಡ್‌ನಲ್ಲಿರುವ ಯಕ್ಷಗಾನ ಕಲಾವಿದ ದಿವಾಕರ ದಾಸ್ ಅವರ ಶ್ರುತಿ ಆರ್ಟ್ಸ್ ಮನೆಗೆ ಹೋಗಿದ್ದು ಏಕಾಏಕಿ ನನ್ನ ಪರಿಚಯದ ಹುಡುಗಿಯನ್ನು ನಿಮ್ಮ ತಂಡದ ಯಕ್ಷಗಾನದಲ್ಲಿ ವೇಷ ಹಾಕಿಸಿದ್ದು ಯಾಕೆ ಎಂದು ಪ್ರಶ್ನಿಸಿದ. ದಿವಾಕರ ದಾಸ್ ಮಾತನಾಡದೆ ಸುಮ್ಮನಿದ್ದರು. ಆತ ಮತ್ತೆ ಜೋರಾಗಿ ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದ. ಇದರಿಂದ ಬೇಸತ್ತ ದಿವಾಕರ ದಾಸ್ ಅವಳಿಗೆ ನನ್ನ ತಂಡದಲ್ಲಿ ವೇಷ ಹಾಕಲು ಇಷ್ಟ ಇದೆ. ಏನಾಯಿತು ಎಂದು ಕೇಳಿದರು. ಇದರಿಂದ ರೊಚ್ಚಿಗೆದ್ದ ಆರೋಪಿ ಅಲ್ಲೇ ಇದ್ದ ಟೈಲರಿಂಗ್ ಮೆಷಿನ್‌ನ ಕತ್ತರಿಯನ್ನು ತೆಗೆದು ಒಮ್ಮೆಲೇ ದಿವಾಕರ ದಾಸ್ ಅವರ ಮೇಲೆರಗಿ ಕತ್ತರಿಯಿಂದ ಇರಿಯಲು ಯತ್ನಿಸಿದ. ಈ ಸಂದರ್ಭದಲ್ಲಿ ಶ್ರುತಿ ಆರ್ಟ್ಸ್‌ನಲ್ಲಿ ದುಡಿಯುತ್ತಿದ್ದ ಕೆಲಸಗಾರರು, ದಿವಾಕರ ದಾಸ್ ಅವರ ಪತ್ನಿ ಮತ್ತು ಮಕ್ಕಳು ಬಂದು ಕೊಟ್ಟಾರಿಯನ್ನು ಹಿಡಿದರು. ಈ ಸಂದರ್ಭದಲ್ಲಿ ದಿವಾಕರ ದಾಸ್ ಅವರ ಪತ್ನಿ ಮತ್ತು ಮಕ್ಕಳಿಗೆ ಗಾಯಗಳಾಗಿವೆ. ಬಳಿಕ ಆತ ದಿವಾಕರ ದಾಸ್, ಪತ್ನಿ ಮಕ್ಕಳಿಗೆ ಬೈದು ನಿಮ್ಮನ್ನು ನೋಡುತ್ತೇನೆ ಎಂದು ಕೊಲೆ ಬೆದರಿಕೆಯೊಡ್ಡಿ ಬೈಕ್ ಏರಿ ಪರಾರಿಯಾಗಲು ಯತ್ನಿಸಿದ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುದ್ಧಿ ತಿಳಿಯುತ್ತಿದ್ದಂತೆ ಎನ್ಸಿ ರೋಡ್‌ನಿಂದ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿ ಕೊಟ್ಟಾರಿಯನ್ನು ಬೆನ್ನತ್ತಿ ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement