ಅಸಮರ್ಪಕ ಕಾರ್ಯಭಾರ ಹಂಚಿಕೆಗೆ ಕೆಲಸ ಕಳೆದುಕೊಂಡ ಅತಿಥಿ ಬೋಧಕರು
ಮಂಗಳೂರು: ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ 491 ಅನುದಾನಿತ ಉಪನ್ಯಾಸಕರನ್ನು 2013-14ನೇ ಶೈಕ್ಷಣಿಕ ಸಾಲಿನ ಮಧ್ಯದಲ್ಲಿ ಉಪನ್ಯಾಸಕರ ಕೊರತೆಯಿರುವ ಕಾಲೇಜುಗಳಿಗೆ ಹಂಚಿಕೆ ಮಾಡಲಾಗಿದೆ. ಇದರಿಂದ ಸುಮಾರು 1 ಸಾವಿರ ಅತಿಥಿ ಉಪನ್ಯಾಸಕರು ತಮ್ಮ ಹುದ್ದೆ ಕಳೆದುಕೊಳ್ಳುವಂತಾಗಿದೆ.
ಹೇಗೆ ಕೆಲಸ ಕಳೆದುಕೊಳ್ಳುವುದು: ಈಗಾಗಲೇ ಅನುದಾನಿತ ಖಾಸಗಿ ಹಾಗೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ಅಥವಾ ಉಪನ್ಯಾಸಕರ ಕೊರತೆಯಿರುವಲ್ಲಿ ಅತಿಥಿ ಉಪನ್ಯಾಸಕರನ್ನು ಕಾಲೇಜು ಮಂಡಳಿಗಳು ಸೇರ್ಪಡೆಗೊಳಿಸಿರುತ್ತಾರೆ. ಆದರೆ ಸರ್ಕಾರದ ಈ ಸುತ್ತೋಲೆಯಿಂದ ಈ ಎಲ್ಲ ಕಾಲೇಜುಗಳಿಗೆ ಹೆಚ್ಚುವರಿ ಕಾರ್ಯಭಾರಕ್ಕೆ ಉಪನ್ಯಾಸಕರನ್ನು ವರ್ಗಾಯಿಸಲಾಗಿದೆ. ವರ್ಷದ ಮಧ್ಯಭಾಗದಲ್ಲಿ ಈ ಸುತ್ತೋಲೆ ಹೊರಡಿಸಿದ ಪರಿಣಾಮ ಈಗಾಗಲೇ ನೇಮಕಗೊಂಡಿರುವ ಅತಿಥಿ ಶಿಕ್ಷಕರು ಬೇರೆ ಯಾವುದೇ ಕಾಲೇಜುಗಳನ್ನು ಸೇರಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅನಿವಾರ್ಯವಾಗಿ ಅತಿಥಿ ಶಿಕ್ಷಕರು ತಮ್ಮ ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ.
2013-14ನೇ ಸಾಲಿನ ಸೆಮಿಸ್ಟರ್ಗಳು ಮುಗಿಯುತ್ತಿದ್ದು, ವರ್ಷದ ಕೊನೆಯ ಸೆಮಿಸ್ಟರ್ ಪ್ರಾರಂಭಗೊಳ್ಳುತ್ತಿರುವ ಸಂದರ್ಭದಲ್ಲಿ ಉಪನ್ಯಾಸಕರನ್ನು ಬೇರೆ ಕಾಲೇಜುಗಳಿಗೆ ವರ್ಗಾಯಿಸಿರುವುದು ನ್ಯಾಯಸಮ್ಮತವೇ ಎಂಬುವುದು ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳ ಪ್ರಶ್ನೆ. ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ವ್ಯಾಪ್ತಿಯಲ್ಲಿ ಒಬ್ಬ ಉಪನ್ಯಾಸಕ ತಾನು ಪ್ರಸ್ತುತ ಕಲಿಸುತ್ತಿರುವ ಕಾಲೇಜು ಸೇರಿದಂತೆ ಹೆಚ್ಚುವರಿಯಾಗಿ 2 ಕಾಲೇಜುಗಳಲ್ಲಿ ಪಾಠ ಮಾಡುವ ಹೊರೆ ನೀಡಲಾಗಿದೆ. ಕಡಿಮೆ ಸಂಬಳಕ್ಕೆ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೋಧಕರು ಮನೆ ಸೇರುವಂತಾಗಿದೆ.
ಕಾಲೇಜು ಶಿಕ್ಷಣ ಇಲಾಖೆ ಆಗಸ್ಟ್ 30 ಕಾರ್ಯಭಾರ ಹಂಚಿಕೆ ಮಾಡಿರುವ ಮೊದಲ ಸುತ್ತೋಲೆಯನ್ನು ಹೊರಡಿಸಿದ್ದು, ಇದರಲ್ಲಿ ಪ್ರಾದೇಶಿಕ ಕಚೇರಿಗಳಾದ ಧಾರವಾಡ- 28, ಮಂಗಳೂರು- 14, ಮೈಸೂರು- 15 ಸೇರಿದಂತೆ ಒಟ್ಟು 119 ಉಪನ್ಯಾಸಕರನ್ನು ಬೇರೆ ಕಾಲೇಜಿಗೆ ನಿಯೋಜಿಸಿತ್ತು.
ಬೆಂಗಳೂರಿನಲ್ಲಿ ಅಕ್ಟೊಬರ್ 3 ರಂದು ಮತ್ತೆ ಕಾರ್ಯಭಾರ ಹಂಚಿಕೆ ಸುತ್ತೋಲೆ ಹೊರಡಿಸಿದ್ದು, ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯಲ್ಲಿಯೇ 227 ಉಪನ್ಯಾಸಕನ್ನು ವರ್ಗಾಯಿಸಲಾಗಿತ್ತು. ಮರು ನಿಯೋಜನೆ ಮಾಡಿರುವ ಉಪನ್ಯಾಸಕರು ಕಡ್ಡಾಯವಾಗಿ ಅ. 30 ರಂದು ಸಂಜೆ 5 ರೊಳಗೆ ಸಂಬಂಧಪಟ್ಟ ಕಾಲೇಜುಗಳಿಗೆ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ಉಪನ್ಯಾಸಕರ ವೇತನವನ್ನು ತಡೆಹಿಡಿಯಲಾಗುತ್ತದೆ ಎಂದು ಸುತ್ತೋಲೆ ಹೊರಡಿಸಿತ್ತು.
ಆದರೆ ಮತ್ತೆ ನ. 6 ರಂದು ಕಾರ್ಯಭಾರ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದು, ಇದರಲ್ಲಿ ಮಂಗಳೂರು-16, ಮೈಸೂರು- 20 ಮಂದಿ ಉಪನ್ಯಾಸಕರ ಕಾರ್ಯಭಾರವನ್ನು ಮತ್ತೆ ಬದಲಾವಣೆ ಮಾಡಲಾಗಿದೆ.
ಶಿವಮೊಗ್ಗ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 62 ಉಪನ್ಯಾಸಕರನ್ನು ಕಾರ್ಯಭಾರ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ದಾವಣಗೆರೆಯ ಉಪನ್ಯಾಸಕನ್ನು ಹರಿಹರ ಕಾಲೇಜಿಗೆ ವಾರದಲ್ಲಿ 2 ದಿನ 4 ಗಂಟೆ ಕೆಲಸ ವಹಿಸಲಾಗಿದೆ. ಚಿತ್ರದುರ್ಗದ ಉಪನ್ಯಾಸಕರಿಗೆ ವಾರದಲ್ಲಿ 2 ದಿನ ಸಾಗರ ಕಾಲೇಜು ಹಾಗೂ ವಾರದಲ್ಲಿ 4 ದಿನ ದಾವಣಗೆರೆಗೆ ವರ್ಗಾಯಿಸಿದ್ದಾರೆ. ಮತ್ತೊಬ್ಬ ಉಪನ್ಯಾಸಕಿಗೆ ವಾರದಲ್ಲಿ 3 ದಿನದ ಎರಡು ಕಾಲೇಜುಗಳಲ್ಲಿ 4 ಗಂಟೆ ಮತ್ತು ಸಿರಿಗೆರೆಗೆ 3 ದಿನ 8 ಗಂಟೆ ಕಾರ್ಯಭಾರ ವಹಿಸಲಾಗಿದೆ.
ವಿಚಿತ್ರವೆಂದರೆ ಈ ಕುರಿತು ಕಾಲೇಜು ಶಿಕ್ಷಣ ಇಲಾಖೆಯು ಅಮುಕ್ತ್, ಪದವಿ ಕಾಲೇಜಿನ ಉಪನ್ಯಾಸಕರ ಸಂಘ, ಖಾಸಗಿ ಕಾಲೇಜಿನ ಆಡಳಿತ ಮಂಡಳಿಗಳ ಜತೆ ಚರ್ಚೆ ನಡೆಸಿಲ್ಲ. ಏಕಾಏಕಿ ನಿರ್ಧಾರ ಕೈಗೊಂಡಿದ್ದು, ವರ್ಗಾವಣೆಗೊಂಡ ಕಾಲೇಜಿಗೆ ತೆರಳಿ ಬೋಧನೆ ಮಾಡುವಂತೆ ಆದೇಶ ನೀಡಿದೆ.
ಕಾರ್ಯಭಾರ ಹಂಚಿಕೆಯಲ್ಲಿ ನಾಲ್ಕು ಬಾರಿ ಮಾರ್ಪಡು ಮಾಡಿದ್ದು, ಈ ಸುತ್ತೋಲೆಯಲ್ಲಿ ವರ್ಗಾಯಿಸಿದ ಉಪನ್ಯಾಸಕರನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ಕಾಲೇಜುಗಳಿಗೆ ಮತ್ತೆ ನಿಯೋಜಿಸಿದೆ. ಇಷ್ಟೆಲ್ಲಾ ಗೊಂದಲವಿರುವ ವ್ಯವಸ್ಥೆಯನ್ನು ಸರಿಪಡಿಸುವ ಬದಲು ಕಾಲೇಜು ಶಿಕ್ಷಣ ಇಲಾಖೆ ಹಾಜರಾಗದಿದ್ದರೆ ವೇತನ ಕಡಿತ ಮಾಡುವುದಾಗಿ ಉಪನ್ಯಾಸಕರಿಗೆ ಕಠಿಣ ಆದೇಶ ನೀಡಿದೆ.
ವಜ್ರಾಕ್ಷಿ ಬಂಟ್ವಾಳ