ನಾಳ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಜೀರ್ಣೋದ್ಧಾರ ಕಾರ್ಯ
ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2014ರ ಜನವರಿ 19ರಿಂದ 23ರವರೆಗೆ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಕ್ಷೇತ್ರದಲ್ಲಿ ಸುಮಾರು 1 ಕೋಟಿ ವೆಚ್ಚದ ಕಾಮಗಾರಿಗಳು ಭರದಿಂದ ಸಾಗಿವೆ.
ಸುಮಾರು 800 ವರ್ಷಗಳ ಇತಿಹಾಸವಿರುವ ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಬದಿಯಲ್ಲಿದೆ. ಶ್ರೀ ದುರ್ಗಾಪರಮೇಶ್ವರಿ ಪ್ರಧಾನ ದೇವರಾಗಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಹಾಗೂ ಪರಿವಾರ ದೈವಗಳಾದ ಕೊಡಮಣಿತ್ತಾಯ ಮತ್ತು ಪಿಲಿಚಾಮುಂಡಿ ದೈವಗಳ ಸಾನಿಧ್ಯವಿದೆ. ದೇವಸ್ಥಾನದ ಒಳಗಡೆಯ ಸುತ್ತುಪೌಳಿಯಲ್ಲಿಯೇ ಬೆಳೆದಿರುವ ಹುತ್ತದಲ್ಲಿಯೇ ಸಾಕ್ಷಾತ್ ನಾಗದೇವರ ಸಾನಿಧ್ಯವಿದೆ.
ಅಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನವನ್ನು 2002ರಲ್ಲಿ 40 ಲಕ್ಷ ವೆಚ್ಚದಲ್ಲಿ ಗರ್ಭಗುಡಿ ನವೀಕರಿಸಿ ಬ್ರಹ್ಮಕಲಶೋತ್ಸವವನ್ನು ನಡೆಸಲಾಗಿತ್ತು. ಬಳಿಕ ಕ್ಷೇತ್ರದಲ್ಲಿ ಅನ್ನಛತ್ರ ನಿರ್ಮಾಣ, ಕ್ಷೇತ್ರದ ಪರಿವಾರ ದೈವಗಳಾದ ಕೊಡಮಣಿತ್ತಾಯ, ಪಿಲಿಚಾಮುಂಡಿ ದೈವಗಳಿಗೆ ದೈವಸ್ಥಾನ ನಿರ್ಮಾಣ, ಸುಮಾರು 25 ಲಕ್ಷ ವೆಚ್ಚದಲ್ಲಿ ನೂತನ ಧ್ವಜಸ್ತಂಭ ಹಾಗೂ ಬ್ರಹ್ಮರಥ ನಿರ್ಮಾಣ ಮಾಡಲಾಗಿದೆ.
ಇದೀಗ 2014ರಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಅಂಗವಾಗಿ ಸುಮಾರು 1 ಕೋಟಿ ವೆಚ್ಚದಲ್ಲಿ ನೂತನ ರಾಜಗೋಪುರ, ದೇವಸ್ಥಾನದ ಮುಖಮಂಟಪ, ದೈವಗಳ ಭಂಡಾರ ಮನೆ, ಸುತ್ತುಪೌಳಿಗೆ ಹೊರಗಡೆಯಿಂದ ಮರದ ಧರಿ ನಿರ್ಮಾಣ, ಅರ್ಚಕರ ಮನೆ, ಅನ್ನಛತ್ರ ನವೀಕರಣ, ಸಭಾಭವನ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿವೆ. ಈಗಾಗಲೇ ಶೇ.50 ಕಾಮಗಾರಿ ನಡೆದಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ ಐಸಿರಿ ನೇತೃತ್ವದಲ್ಲಿ ಭಕ್ತಾಧಿಗಳು ಈ ಮಹೋನ್ನತ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಬ್ರಹ್ಮಕಲಶ ಸಮಿತಿ ಸಭೆ: ಬ್ರಹ್ಮಕಲಶೋತ್ಸವವನ್ನು ಯಶಸ್ವಿಯಾಗಿ ನಡೆಸುವ ಸಲುವಾಗಿ ಬ್ರಹ್ಮಕಲಶೋತ್ಸವ ಸಮಿತಿ, ಉಪಸಮಿತಿಗಳ ರಚನೆ ಮಾಡುವ ಉರ್ದೇಶದಿಂದ ನ್ಯಾಯತರ್ಪು, ಕಳಿಯ ಹಾಗೂ ಒಡಿಲ್ನಾಳ ಗ್ರಾಮದ ಭಕ್ತಾಧಿಗಳ ಸಭೆಯನ್ನು ನ.23ರಂದು ಬೆಳಿಗ್ಗೆ 10 ಗಂಟೆಗೆ ದೇವಸ್ಥಾನದಲ್ಲಿ ಕರೆಯಲಾಗಿದೆ. ಈ ಸಭೆಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ, ಸೂಚನೆಗಳನ್ನು ನೀಡಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ ಐಸಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.