ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಶ್ಚಿಮ ಘಟ್ಟ ಸಂರಕ್ಷಣೆ: ಎರಡೂ ವರದಿ ಅನುಷ್ಠಾನ ತನ್ನಿ

Mainashree
Updated On : 20 Nov 2013, 12:16 pm

ಮಂಗಳೂರು: 'ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಕೇಂದ್ರ ಪರಿಸರ ಸಚಿವಾಲಯ ಡಾ.ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಒಪ್ಪಿಕೊಂಡು ಜಾರಿಗೆ ತಂದಿದೆ. ಅದರಂತೆ ಪರಿಸರ ತಜ್ಞ ಪ್ರೊ.ಮಾಧವ ಗಾಡ್ಗೀಳ್ ವರದಿಯನ್ನೂ ಅನುಷ್ಠಾನಕ್ಕೆ ತನ್ನಿ.'
ಪಶ್ಚಿಮ ಘಟ್ಟ ಸಂರಕ್ಷಣೆ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ ಗೋವಾ ಫೌಂಡೇಶನ್ ರಾಷ್ಟ್ರೀಯ ಹಸಿರು ನ್ಯಾಯಾಲಯ (ಎನ್‌ಜಿಟಿ) ಹಾಗೂ ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿ ಇದು. ಇದೇ ವೇಳೆ ಡಾ.ಕಸ್ತೂರಿ ರಂಗನ್ ವರದಿಯಲ್ಲಿ ಜಲವಿದ್ಯುತ್ ಯೋಜನೆ ಮತ್ತು ನದಿ ತಿರುವು ಯೋಜನೆ ಬಗ್ಗೆ ನಿಖರವಾಗಿ ಪ್ರಸ್ತಾಪಿಸದಿರುವುದರ ಕುರಿತು ಗೋವಾ ಫೌಂಡೇಶನ್ ಆತಂಕ ವ್ಯಕ್ತಪಡಿಸಿದೆ.
ಎರಡೂವರೆ ವರ್ಷ ಅಧ್ಯಯನ ನಡೆಸಿದ ಪ್ರೊ.ಗಾಡ್ಗೀಳ್ ಸಮಿತಿ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಸಮಗ್ರ ವರದಿ ಕೇಂದ್ರಕ್ಕೆ ಸಲ್ಲಿಸಿತ್ತು. ಈ ವರದಿ ಬದಿಗೆ ತಳ್ಳಿದ ಪರಿಸರ ಇಲಾಖೆ, ನಂತರ ನೇಮಿಸಿದ ಡಾ.ಕಸ್ತೂರಿ ರಂಗನ್ ವರದಿ ಕೈಗೆತ್ತಿಕೊಂಡು ತರಾತುರಿಯಲ್ಲಿ ಅನುಷ್ಠಾನಿಸಿತು.
ಕಳೆದ ಡಿ.17ರಂದು ಪ್ರೊ.ಗಾಡ್ಗೀಳ್ ವರದಿ ಜಾರಿಗೆ ತರುವಂತೆ ಗೋವಾ ಫೌಂಡೇಶನ್ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೊರೆ ಹೋಗಿತ್ತು. ಪ್ರಕರಣ ಪರಿಶೀಲಿಸಿದ ನ್ಯಾಯಮಂಡಳಿ, ಪ್ರೊ.ಗಾಡ್ಗೀಳ್ ಮತ್ತು ಡಾ.ಕಸ್ತೂರಿ ರಂಗನ್ ವರದಿ ಪೈಕಿ ಒಂದನ್ನು ತ್ವರಿತವಾಗಿ ಜಾರಿಗೆ ತರುವಂತೆ ಸೂಚಿಸಿತ್ತು. ಅದರಂತೆ ಕೇಂದ್ರ ಪರಿಸರ ಇಲಾಖೆ ಡಾ.ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತಂದಿದೆ.
ಎರಡೂ ವರದಿ ಅನುಷ್ಠಾನಿಸಿ: ಈ ಬಗ್ಗೆ ಅಂತಿಮ ತೀರ್ಪು ಹಸಿರು ನ್ಯಾಯ ಮಂಡಳಿಯಿಂದ ಹೊರಬಿದ್ದಿಲ್ಲ. ಕೇಂದ್ರ ಪರಿಸರ ಸಚಿವಾಲಯ ಯಾವ ಕಾರಣಕ್ಕೆ ಡಾ.ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಂಡಿದೆ? ಪ್ರೊ.ಗಾಡ್ಗೀಳ್ ವರದಿ ತಿರಸ್ಕರಿಸಲು ಕಾರಣಗಳೇನು? ಯಾಕಾಗಿ ಎರಡೂ ವರದಿಯನ್ನು ಅನುಷ್ಠಾನಿಸಲು ಸಾಧ್ಯವಿಲ್ಲ? ಇದಕ್ಕೆ ಸ್ಪಷ್ಟ ವಿವರಣೆ ಬಯಸಿ ಗೋವಾ ಫೌಂಡೇಶನ್ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದೆ. 'ಇಲ್ಲಿಯೂ ನ್ಯಾಯ ಸಿಗದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಎರಡೂ ವರದಿ ಅನುಷ್ಠಾನಿಸಬೇಕು ಎಂಬುದು ಆಗ್ರಹ' ಎಂದು ಫೌಂಡೇಶನ್ ನಿರ್ದೇಶಕ ಕ್ಲೌಡಾ ಆಳ್ವರಿಸ್ ತಿಳಿಸಿದ್ದಾರೆ.
ಜಲವಿದ್ಯುತ್ ಯೋಜನೆಗೆ ಮರುಜೀವ?: ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ಡಾ.ಕಸ್ತೂರಿ ರಂಗನ್ ವರದಿ ಜಾರಿಗೊಂಡ ಹಿನ್ನೆಲೆಯಲ್ಲಿ ಗುಂಡ್ಯ ಹಾಗೂ ಕೇರಳದ ಅದಿರುಪಲ್ಲಿ ಜಲವಿದ್ಯುತ್ ಯೋಜನೆಗೆ ಮರುಜೀವ ಸಿಗುವ ಭೀತಿ ಎದುರಾಗಿದೆ. ಅಲ್ಲದೆ ಉದ್ದೇಶಿತ ಎತ್ತಿನಹೊಳೆ ಯೋಜನೆ ಕಾರ್ಯಗತಗೊಳಿಸುವುದು ಸುಲಭವಾಗಲಿದೆ.
ದೇಶದ 7 ರಾಜ್ಯಗಳಲ್ಲಿ ಪಶ್ಚಿಮ ಘಟ್ಟ ವ್ಯಾಪಿಸಿದ್ದು, ಶೇ.35 ಅರಣ್ಯ ಉಳಿದರೆ ಸಾಕು ಎಂದು ಡಾ.ಕಸ್ತೂರಿ ರಂಗನ್ ವರದಿ ಹೇಳಿದೆ. ಪ್ರೊ.ಗಾಡ್ಗೀಳ್ ವರದಿಯಲ್ಲಿ ಶೇ.65 ಅರಣ್ಯ ಉಳಿಯಬೇಕು. ಅಲ್ಲದೆ ಪಶ್ಚಿಮ ಘಟ್ಟಗಳಲ್ಲಿರುವ ಅಪೂರ್ವ ಜೀವವೈವಿಧ್ಯ ಸಂರಕ್ಷಣೆಗೆ ಜಲವಿದ್ಯುತ್ ಯೋಜನೆ, ನದಿ ತಿರುವು ಯೋಜನೆ ಜಾರಿಗೊಳಿಸಬಾರದು ಎಂದು ತಿಳಿಸಿದೆ.
ಆದರೆ ಡಾ.ಕಸ್ತೂರಿ ರಂಗನ್ ವರದಿಯಲ್ಲಿ ಜಲವಿದ್ಯುತ್ ಯೋಜನೆ, ನದಿ ತಿರುವಿನ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಇದನ್ನೇ ಮಾನದಂಡವಾಗಿಟ್ಟುಕೊಂಡು ಕೇಂದ್ರ ಪರಿಸರ ಇಲಾಖೆ ಜಲವಿದ್ಯುತ್ ಯೋಜನೆಗೆ ಹಸಿರು ನಿಶಾನೆ ತೋರಿಸುವ ಸಾಧ್ಯತೆ ಇದೆ. ಇದರ ವಿರುದ್ಧ ಕೇರಳದಲ್ಲಿ ಪ್ರತಿಭಟನೆಯ ಸೊಲ್ಲೆತ್ತಿದರೆ, ರಾಜ್ಯದಲ್ಲಿ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತಗೊಂಡಿದೆ.
ನನ್ನ ಕೆಲಸ ನಾನು ಮಾಡಿದ್ದೇನೆ. ಆದರೂ ನನ್ನ ವರದಿ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಪಶ್ಚಿಮ ಘಟ್ಟ ಸಂರಕ್ಷಣೆಯ ಅಗತ್ಯತೆ ಬಗ್ಗೆ ವಾಸ್ತವಾಂಶಗಳನ್ನು ಜನರ ಮುಂದಿಟ್ಟಿದ್ದೇನೆ. ವರದಿಯನ್ನು ಯಾಕೆ ಸರ್ಕಾರ ಕೈಗೆತ್ತಿಕೊಂಡಿಲ್ಲ ಎಂಬುದು ಗೊತ್ತಿಲ್ಲ.
ಟಿ ಪ್ರೊ.ಮಾಧವ ಗಾಡ್ಗೀಳ್ ಪರಿಸರ ತಜ್ಞ
ಕೇಂದ್ರ ಸರ್ಕಾರ ಪ್ರೊ.ಗಾಡ್ಗೀಳ್ ವರದಿಗೆ ಮನ್ನಣೆ ಸಿಗದಿರುವುದು ಬೇಸರ ಮೂಡಿಸಿದೆ. ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ಬೇರೆ ವರದಿಯನ್ನು ಪಡೆಯುವುದು ಸರಿಯಾದ ಕ್ರಮವಲ್ಲ. ಪ್ರೊ.ಗಾಡ್ಗೀಳ್ ವರದಿ ಜಾರಿಗೊಳಿಸದಿದ್ದರೆ ಪಶ್ಚಿಮ ಘಟ್ಟಕ್ಕೆ ಅಪಾಯ ತಪ್ಪಿದ್ದಲ್ಲ.
- ವಿದ್ಯಾ ಎಸ್.ನಾಯಕ್, ಕೇಂದ್ರ ತಜ್ಞರ ಸಮಿತಿ ಸದಸ್ಯೆ
ಪ್ರೊ.ಗಾಡ್ಗೀಳ್ ವರದಿ ಅನುಷ್ಠಾನಿಸಿದರೆ ಒಳ್ಳೇದಿತ್ತು. ಡಾ.ಕಸ್ತೂರಿ ರಂಗನ್ ಸಮಿತಿ ಸರಿಯಾಗಿ ಅಧ್ಯಯನ ನಡೆಸಿಲ್ಲ. ಯಾವುದೇ ಕಾರಣಕ್ಕೆ ಜಲವಿದ್ಯುತ್ ಯೋಜನೆ, ನದಿ ತಿರುವು ಯೋಜನೆ ಅನುಷ್ಠಾನಿಸಬಾರದು.
- ಸುಂದರ ರಾವ್, ಪರಿಸರವಾದಿ, ಬಂಟ್ವಾಳ

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement