ವಾಮಚಾರಕ್ಕೆ ಬಲಿಯಾಯಿತೇ ಹಸುಗೂಸು?
ಸುಬ್ರಹ್ಮಣ್ಯ: ಇಲ್ಲಿನ ಚಾರ್ಮತ ಎಂಬಲ್ಲಿ ಹಾಲುಗಲ್ಲದ ಹೆಣ್ಣು ಮಗು ಸಾರಿಕ ಮೃತಪಟ್ಟು ಮೂರು ತಿಂಗಳು ಕಳೆದಿವೆ. ಆದರೂ ಆ ಮನೆಯಲ್ಲಿ ಸೂತಕದ ಛಾಯೆ ಇನ್ನೂ ಮಾಸಿಲ್ಲ. ಈ ಮಗುವಿನ ಅಸಹಜ ಸಾವಿನ ಕುರಿತು ಇದ್ದ ಸಂಶಯಗಳಿಗೆ ಇದೀಗ ರೆಕ್ಕೆಪುಕ್ಕ ಹುಟ್ಟಿಕೊಂಡಿದ್ದು, ಮಗುವನ್ನು ವಾಮಚಾರಕ್ಕೆ ಬಳಸಲಾಗಿದೆ ಎಂಬ ಶಂಕೆಗೆ ಮತ್ತಷ್ಟು ಬಲ ಬಂದಿದೆ.
ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಯಲೇ ಬೇಕು ಎಂಬ ಒತ್ತಡ ಹೆತ್ತವರಿಂದ ಮತ್ತು ಸ್ಥಳೀಯರಿಂದ ವ್ಯಕ್ತವಾಗಿದೆ.
ಆವತ್ತೇನಾಯ್ತು?: ನಡುಗಲ್ಲು ಸಮಿಪದ ಚಾರ್ಮತ ಕೋಡ್ತುಗಳಿ ಮೋಹನದಾಸ- ಭವಾನಿ ದಂಪತಿಯ ಹೆಣ್ಣು ಮಗು ಸಾರಿಕ (1 ವರ್ಷ 11 ತಿಂಗಳು) ಎಂಬಾಕೆ ಕಳೆದ ಆಗಸ್ಟ್ ತಿಂಗಳಲ್ಲಿ ನಾಗರಪಂಚಮಿ ದಿನ ಮನೆಯಿಂದ ನಾಪತ್ತೆಯಾಗಿತ್ತು. ತಾಯಿ ಸಂಘದ ಗುಂಪಿನ ಸಭೆಗೆಂದು ಮನೆಯಲ್ಲಿ ಅಜ್ಜಿ ಮಡಿಲಲ್ಲಿ ಮಗುವನ್ನು ಬಿಟ್ಟು ಹೋಗಿದ್ದರು. ತಂದೆ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಅಜ್ಜಿ ಜೊತೆ ಅಂಗಳದಲ್ಲಿ ಆಟವಾಡುತಿದ್ದ ಹಸುಳೆ ಮಧ್ಯಾಹ್ನ 1.30ರ ವೇಳೆಗೆ ನಾಪತ್ತೆಯಾಗಿತ್ತು. ತಾಯಿ ಸಭೆಗೆ ಹೋದಾಕೆ ಹಿಂತಿರುಗಿ ಬಂದು ಮಗುವನ್ನು ಕರೆದಾಗ ಮಗು ಕಾಣದ್ದರಿಂದ ಹುಡುಕಾಟ ನಡೆಸಿದ್ದರು. ಮನೆ ಮುಂದೆ ಸುಮಾರು 100 ಮೀ. ದೂರದಲ್ಲಿ ಚಿಕ್ಕ ಹೊಳೆ ಹರಿಯುತಿದ್ದು, ಮಗು ಹೊಳೆಗೆ ಬಿದ್ದು ಕೊಚ್ಚಿ ಹೋಗಿರಬಹುದು ಎಂದು ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಮಗು ಮಾತ್ರ ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸರಿಗೆ ಹೆತ್ತವರು ದೂರು ನೀಡಿದ್ದರು. ಮಗುವನ್ನು ವಾಮಚಾರಕ್ಕೆ ಬಲಿ ಕೊಡಲು ಅಪಹರಿಸಿದ್ದಿರಬಹುದೆಂಬ ಶಂಕೆ ಆವತ್ತೇ ದಟ್ಟವಾಗಿ ಹಬ್ಬಿತ್ತು. ಆದರೆ ಪೊಲೀಸರು ಮಾತ್ರ ಮಗು ನೀರಿನಲ್ಲೇ ಕೊಚ್ಚಿ ಹೋಗಿದೆ ಎಂದೇ ವಾದಿಸಿದ್ದರು.
ಮಗುವಿನ ಶವ ಪತ್ತೆ: ಮಗುವಿನ ಶವ 13 ದಿನಗಳ ಬಳಿಕ ಮನೆಗೆ ಸುಮಾರು 2 ಕಿ.ಮೀ. ದೂರದ ಜೇನು ಕೋಡಿ ಎಂಬಲ್ಲಿ ಹೊಳೆಯಲ್ಲಿ ಪತ್ತೆಯಾಯಿತು. ಸ್ಥಳೀಯರೊಬ್ಬರು ಗಾಳ ಹಾಕುವ ಸಂದರ್ಭ ನದಿ ನೀರಿನಲ್ಲಿ ಅಡಕೆ ಸಲಾಕೆಯ ಮೇಲೆ ಮಲಗಿಸಿದ ರೀತಿಯಲ್ಲಿ ಶವ ಕಂಡುಬಂದಿದೆ. ಮಗುವಿನ ಶವದಲ್ಲಿ ತಲೆ ಮತ್ತು ಬಲ ಕೈ ಇರಲಿಲ್ಲ ಮತ್ತು ಶವ ಅಷ್ಟೂ ಕೊಳೆತಿರಲಿಲ್ಲ. ಶವವನ್ನು ಕಂಡ ಸ್ಥಳೀಯರು, ಇದು ಇತ್ತೀಚೆಗೆ ತಂದು ಹಾಕಿದ ಹಾಗೆ ಕಂಡುಬರುತ್ತಿದೆ ಮತ್ತು 13 ದಿನಗಳಲ್ಲಿ ಶವ ಈ ರೀತಿ ಹಸಿ ಹಸಿಯಾಗಿರಲು ಸಾಧ್ಯವೇ ಇಲ್ಲ ಎಂಬ ಬಗ್ಗೆ ಸಂಶಯ ವ್ಯಕ್ತಪಡಿದ್ದರು. ತಲೆ, ಕೈ ಇಲ್ಲದಿರುವುದು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿತ್ತು. ಆದರೆ ಪೊಲೀಸರು ಅದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಮಗು ನೀರಿಗೆ ಬಿದ್ದು ಕೊಚ್ಚಿ ಹೋಗಿ ಉಸಿರು ಕಟ್ಟಿ ಸತ್ತಿದೆ ಎಂದು ಪ್ರಕರಣ ದಾಖಲಿಸಿ ಇತಿಶ್ರೀ ಹಾಕಿದ್ದರು.
ಜ್ಯೋತಿಷಿಗಳ ಮೊರೆಹೋದ ಹೆತ್ತವರು: ಮಗುವಿನ ನಾಪತ್ತೆ ದಿನದಿಂದ ಹೆತ್ತವರು, ಸಂಬಂಧಿಕರು ಮಗುವಿನ ಕಣ್ಮರೆ ಕುರಿತಂತೆ ಹಲವಾರು ಜ್ಯೋತಿಷಿಗಳ ಮೊರೆ ಹೋಗಿದ್ದರು. ಅದರಂತೆ ಪ್ರಶ್ನೆಯಲ್ಲಿ ಮಗು ಜೀವಂತ ಇದೆ ಎಂಬ ಬಗ್ಗೆ ಹೆಚ್ಚಿನ ಕಡೆ ಕಂಡುಬಂದಿತ್ತು ಮತ್ತು ಈ ಬಗ್ಗೆ ಸಾಕಷ್ಟು ಸುಳಿವು ಪ್ರಶ್ನೆಯಲ್ಲಿ ನೀಡಿದ್ದರು. ಪೊಲೀಸರು ಮಾತ್ರ ಮೂಢನಂಬಿಕೆಯ ಆಧಾರದಲ್ಲಿ ತನಿಖೆ ನಡೆಸಲು ಸಾಧ್ಯವಿಲ್ಲ, ಅದೆಲ್ಲ ಸುಳ್ಳು ಎಂದು ವಾದಿಸಿದ್ದರು.
ಬಾಳುಗೋಡು ಗ್ರಾಮದ ಕಿರಿಭಾಗ ರಕ್ಷಿತಾರಣ್ಯದ ರತ್ನಾಪುರ ಎಂಬಲ್ಲಿ ಪುರಾತನ ದೇವಾಲಯ ಇತ್ತೆನ್ನಲಾದ ಜಾಗದಲ್ಲಿ ವಾಮಚಾರದ ಮೂಲಕ ನಿಧಿ ತೆಗೆಯಲಾಗಿದೆ, ಇದಕ್ಕೆ ನರ ಬಲಿ ಕೊಡಲಾಗಿದೆ ಎಂಬ ಶಂಕೆ ಇದ್ದು, ಇದೇ ಜಾಗದಲ್ಲಿ ವಾಮಚಾರಕ್ಕೆ ಬಳಸಿದ ಪೂಜಾ ಸಾಮಗ್ರಿಗಳು ಕುರುಹು ರೂಪದಲ್ಲಿ ಕಂಡುಬಂದಿದ್ದರಿಂದ ಇಲ್ಲಿ ವಾಮಚಾರ ನಡೆದ ಬಗ್ಗೆ ಖಾತ್ರಿಯಾಗುತ್ತಿದೆ. ಹಾಗಾಗಿ ಮಗುವನ್ನು ದುಷ್ಕರ್ಮಿಗಳು ಬಲಿ ಕೊಟ್ಟಿರಬಹುದು ಎಂಬ ಶಂಕೆ ವ್ಯಾಪಕವಾಗಿತ್ತು.
ಈ ಪ್ರಕರಣದ ಬಗ್ಗೆ ಎಲ್ಲ ದೃಷ್ಟಿಕೋನಗಳಲ್ಲಿ ತನಿಖೆಯಾಗಬೇಕು. ಉನ್ನತ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಯಬೇಕು ಎಂಬ ಕೂಗು ಈ ಭಾಗದಲ್ಲಿ ಹೆಚ್ಚಾಗಿದೆ.