ಸಹಕಾರಿ ಕ್ಷೇತ್ರದಲ್ಲಿ ಗ್ರಾಹಕ ಸಂಪತ್ತು ಸರ್ವ ಶ್ರೇಷ್ಠ: ರಾಜೇಂದ್ರ ಕುಮಾರ್
ಉಪ್ಪಿನಂಗಡಿ: ಸಹಕಾರಿ ಕ್ಷೇತ್ರದಲ್ಲಿ ಅನ್ಯ ಸಂಪತ್ತಿಗಿಂತ ಗ್ರಾಹಕ ಸಂಪತ್ತು ಸರ್ವ ಶ್ರೇಷ್ಠ ಸಂಪತ್ತಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಅವರು ಮಂಗಳವಾರ ಉಪ್ಪಿನಂಗಡಿಯ ಸಿ.ಎ. ಬ್ಯಾಂಕ್ ವತಿಯಿಂದ ಆಚರಿಸಲಾದ 60ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಆಚರಣೆಯ ಅಂಗವಾಗಿ ಸಂಪೂರ್ಣ ಹವಾ ನಿಯಂತ್ರಿತ ಕೇಂದ್ರ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಭಾಸ್ಕರ ಆಚಾರ್ಯ, ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯ ಗುರುತಿನ ಚೀಟಿಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ದಿವಾಕರ ರೈ, ಹೊಲಿಗೆ ಯಂತ್ರವನ್ನು ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಬಿ. ನಿರಂಜನ್ ವಿತರಿಸಿ ಮಾತನಾಡಿದರು.
ಸಭೆಯಲ್ಲಿ ಸವಣೂರು ಸಿ.ಎ. ಬ್ಯಾಂಕ್ನ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಉದಯ್ ರೈ ಮಾದೋಡಿ, ಉಪ್ಪಿನಂಗಡಿ ಸಿ.ಎ. ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಎನ್. ಗೋಪಾಲ ಹೆಗ್ಡೆ ಪ್ರಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ನಿರ್ದೇಶಕ ಅಜೀಜ್ ಬಸ್ತಿಕಾರ್ ವಂದಿಸಿದರು. ಬ್ಯಾಂಕಿನ ಸಿಬ್ಬಂದಿ ಪುಷ್ಪರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕರೆಯದೇ ಬಂದರು...: ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ವತಿಯಿಂದ ಸಹಕಾರಿ ಸಪ್ತಾಹವನ್ನು ಸರಳವಾಗಿ ಆಚರಿಸಲು ಭಾಸ್ಕರ ಆಚಾರ್ಯ ನೇತೃತ್ವದ ಆಡಳಿತ ಮಂಡಳಿ ನಿರ್ಧರಿಸಿತ್ತು. ಹೀಗಾಗಿ ಆಮಂತ್ರಣ ಪತ್ರವನ್ನೂ ಮಾಡದೇ ಫೋನ್ ಕರೆ ಮಾಡಿ ಕೆಲವರನ್ನು ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ, ಕೊಕ್ಕಡ ಪರಿಸರದಲ್ಲಿ ಕಾರ್ಯಕ್ರಮದಲ್ಲಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತನಗೆ ಯಾವುದೇ ಆಮಂತ್ರಣವಿಲ್ಲದಿದ್ದರೂ ಇಡೀ ಬ್ಯಾಂಕನ್ನು ಹವಾನಿಯಂತ್ರಿತಗೊಳಿಸಿದ ಉಪ್ಪಿನಂಗಡಿ ಸಿ.ಎ. ಬ್ಯಾಂಕಿನ ಕ್ರಮವನ್ನು ಕೇಳಿ ತಿಳಿದು ನೇರವಾಗಿ ಬ್ಯಾಂಕ್ಗೆ ಆಗಮಿಸಿದರು.
ದಿಢೀರ್ ಆಗಮಿಸಿದ ಅಧ್ಯಕ್ಷರನ್ನು ಕಂಡು ಪುಳಕಿತರಾದ ಬ್ಯಾಂಕ್ ಆಡಳಿತ ಮಂಡಳಿಯು ತಕ್ಷಣ ಅವರನ್ನು ಸರಳವಾಗಿ ಸನ್ಮಾನಿಸಿ ಸ್ವಾಗತಿಸಿತು. ಮಾತ್ರವಲ್ಲದೆ ಬ್ಯಾಂಕಿನ ಹವಾ ನಿಯಂತ್ರಣ ವ್ಯವಸ್ಥೆಯನ್ನು ಅವರಿಂದಲೇ ಉದ್ಘಾಟಿಸುವ ಕಾರ್ಯವನ್ನು ಕೈಗೊಂಡರು.
ಉತ್ತಮ ಕಾರ್ಯವನ್ನು ಶ್ಲಾಘಿಸಲೇ ಬೇಕು. ಅದಕ್ಕೂ ಮಿಗಿಲಾಗಿ ಗ್ರಾಹಕರ ಹಿತದ ಹಿನ್ನೆಲೆಯಲ್ಲಿ ಬ್ಯಾಂಕಿನ ಕಚೇರಿಯನ್ನು ಹವಾ ನಿಯಂತ್ರಣಕ್ಕೆ ಒಳಪಡಿಸಿದ ಉಪ್ಪಿನಂಗಡಿ ಸಿ.ಎ. ಬ್ಯಾಂಕಿನ ಕ್ರಮವನ್ನು ಶ್ಲಾಘಿಸಿ ಹೋಗಲು ಬಂದೆ. ನನಗೆ ಈ ಕಾರ್ಯ ಮಾಡಲು ಯಾವುದೇ ಆಮಂತ್ರಣ ಬೇಡ ಎಂದು ಹೇಳಿದರು.