ಸುದ್ದಿ ಸಂಕ್ಷೇಪ
ಇಂದು ನಮೋ ರ್ಯಾಲಿ
ಮಂಗಳೂರು: ಗುರುಪುರ ನಮೋ ಬ್ರಿಗೇಡ್ ವತಿಯಿಂದ ನ.20ರಂದು ಪುಂಚಮೆ ಮೈದಾನಲ್ಲಿ ಬೃಹತ್ ವಾಹನ ರ್ಯಾಲಿ ಆಯೋಜಿಸಲಾಗಿದೆ. ಗಂಜಿಮಠ ಮಹಾಗಣಪತಿ ದೇವಸ್ಥಾನದಲ್ಲಿ ರ್ಯಾಲಿಗೆ ಚಾಲನೆ ನೀಡಲಾಗುವುದು ಎಂದು ಸಂಘಟಕ ವಿಜಯ ಗೌಡ ಶಿಬ್ರಿಕೆರೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿಜಿ, ಚಕ್ರವರ್ತಿ ಸೂಲೆಬೆಲೆ, ವಕೀಲ ಪಿ.ಪಿ.ಹೆಗ್ಡೆ ಭಾಗವಹಿಸುವರು ಎಂದರು.
ಕುಡುಪು ಸರೋವರ ಅರ್ಪಣೆ
ಮಂಗಳೂರು: ಕುಡುಪು ಅನಂತಪದ್ಮನಾಭ ದೇವಸ್ಥಾನದ ನವೀಕೃತ ಸರೋವರ 22ರಂದು ಉದ್ಘಾಟನೆಗೊಳ್ಳಲಿದೆ. ಕುಡುಪು ಭದ್ರತೀರ್ಥ ಸರೋವರ ಪುರಾತನವಾದದ್ದು. ಸರೋವರವನ್ನು 60 ಲಕ್ಷ ವೆಚ್ಚದಲ್ಲಿ ಹೂಳೆತ್ತಿ ನವೀಕರಣಗೊಳಿಸಲಾಗಿದೆ ಎಂದು ನವೀಕರಣ ಸಮಿತಿ ಕಾರ್ಯಾಧ್ಯಕ್ಷ ಕೆ.ಕೃಷ್ಣರಾಜ ತಂತ್ರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಿ.3ರಿಂದ 8ರವರೆಗೆ ಷಷ್ಠಿ ಮಹೋತ್ಸವ, ಕಿರುಷಷ್ಠಿ ಮಹೋತ್ಸವ ಜ.6ರಂದು ನಡೆಯಲಿದೆ ಎಂದರು. ಕೆ.ಭಾಸ್ಕರ, ಕೆ.ಮನೋಹರ ಭಟ್, ಎನ್.ಕೃಷ್ಣಪ್ಪ ಇದ್ದರು.
22ರಂದು ಸುಮಸೌರಭ ಅಭಿನಂದನೆ
ಮಂಗಳೂರು: ಕನ್ನಡ ಪಾಕ್ಷಿಕ ಸುಮಸೌರಭ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸೌರಭ ಅಭಿನಂದನೆ 22ರಂದು ಪುರಭವನದಲ್ಲಿ ನಡೆಯಲಿದೆ. ರಾಜ್ಯೋತ್ಸವ ಅಂಗವಾಗಿ ಹಾಸ್ಯ, ನೃತ್ಯ ಆಯೋಜಿಸಲಾಗಿದೆ ಎಂದು ಸುಮಸೌರಭ ಸಂಪಾದಕ ಎಂ.ಜೆ.ರಾವ್ ತಿಳಿಸಿದರು.
ನಿರ್ಮಲಾಗೆ 'ಡಿಸೋಜಾ ಎಚ್ಚೆಸ್ವಿ' ಪ್ರಶಸ್ತಿ
ಹಾನಗಲ್ಲ: ದಕ್ಷಿಣ ಕನ್ನಡದ ನಿರ್ಮಲಾ ಸುರತ್ಕಲ್ ಅವರ 'ಪಾತರಗಿತ್ತಿ ಪಕ್ಕಾ' ಮಕ್ಕಳ ಕವನ ಸಂಕಲನಕ್ಕೆ 2012-13ನೇ ಸಾಲಿನ 'ಡಿಸೋಜಾ-ಎಚ್ಚೆಸ್ವಿ' ಪುಟಾಣಿ ಸಾಹಿತ್ಯ ಪುರಸ್ಕಾರ ಲಭಿಸಿದೆ. ಹಾನಗಲ್ಲ ತಾಲೂಕು ಕನ್ನಡ ಯುವಜನ ಕ್ರಿಯಾ ಸಮಿತಿ ಈ ಸಲದಿಂದ ಹೆಸರಾಂತ ಸಾಹಿತಿಗಳು ಹಾಗೂ ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಡೋಜ ನಾ. ಡಿಸೋಜಾ ಹಾಗೂ ಎಚ್.ಎಸ್. ವೆಂಕಟೇಶಮೂರ್ತಿ ಅವರ ಹೆಸರಲ್ಲಿ 'ಡಿಸೋಜಾ-ಎಚ್ಚೆಸ್ವಿ' ಪುಟಾಣಿ ಸಾಹಿತ್ಯ ಪುರಸ್ಕಾರವನ್ನು ನೀಡಲು ಆರಂಭಿಸಿದ್ದು, ಈ ಪ್ರಶಸ್ತಿಗೆ ಒಟ್ಟು 25 ಕೃತಿಗಳು ಪರಿಶೀಲನೆಗಾಗಿ ಬಂದಿದ್ದವು. ಮಕ್ಕಳ ಸಾಹಿತ್ಯದಲ್ಲಿ ವಿಶಿಷ್ಟ ಕೃಷಿ ಮಾಡುತ್ತಿರುವ ಮೈಸೂರು ಆಕಾಶವಾಣಿಯಲ್ಲಿರುವ ಸಾಹಿತಿ ಆನಂದ ಪಾಟೀಲರ ನೇತೃತ್ವದ ತೀರ್ಪುಗಾರರ ಸಮಿತಿ ನಿರ್ಮಲಾ ಸುರತ್ಕಲ್ ಅವರ ಕೃತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿತು. ಈ ಪುರಸ್ಕಾರ 5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ಫೆಬ್ರವರಿ ಹುಬ್ಬಳ್ಳಿಯಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ನೆರವೇರಲಿದೆ ಎಂದು ಸಮಿತಿಯ ಸಂಚಾಲಕ ವಿಜಯಕಾಂತ ಪಾಟೀಲ್ ಹಾಗೂ ಚನ್ನಪ್ಪ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕ ಮೊಯ್ದಿನ್ ಬಾವಾ ಪಿಎ ನಿಧನ
ಮಂಗಳೂರು: ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವ ಅವರ ಆಪ್ತ ಕಾರ್ಯದರ್ಶಿ ಪ್ರಕಾಶ್(51)ಹೃದಯಾಘಾತದಿಂದ ಮಂಗಳವಾರ ಸಾವಿಗೀಡಾಗಿದ್ದಾರೆ.
ಬಿಜೈ ಕಾಪಿಕಾಡ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರಿಗೆ ಮುಂಜಾನೆ ಹಠಾತ್ ಎದೆ ನೋವು ಕಾಣಿಸಿತ್ತು. ಬಳಿಕ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೂಲತಃ ಚಿಕ್ಕಮಗಳೂರು ನಿವಾಸಿಯಾದ ಇವರು ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇಲ್ಲಿನ ಡಿಡಿಪಿಐ ಕಚೇರಿಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಐದು ವರ್ಷ ಕಾಲ ಕರ್ತವ್ಯ ನಿರ್ವಹಿಸಿ 15 ದಿನ ಹಿಂದೆ ಶಾಸಕರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ವಿಷಾಹಾರ: ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ
ಮಂಗಳೂರು: ನಗರದ ಕಾಲೇಜೊಂದರ ಕೊಡಿಯಾಲಬೈಲ್ ಹಾಸ್ಟೆಲ್ನ 15 ವಿದ್ಯಾರ್ಥಿಗಳು ವಿಷ ಆಹಾರ ಸೇವನೆಯಿಂದ ಅಸ್ವಸ್ಥರಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಡಿಯಾಲಬೈಲ್ನಲ್ಲಿರುವ ಬಾಲಕರ ಹಾಸ್ಟೆಲ್ನಲ್ಲಿ ಮಂಗಳವಾರ ರಾತ್ರಿ 8 ಗಂಟೆಯ ವೇಳೆಗೆ ಊಟ ಮಾಡಿದ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ತಲೆ ಸುತ್ತುವಿಕೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ.
24ರಂದು ಅವಿಭಜಿತ ದ.ಕ ಜಿಲ್ಲಾ ಮಟ್ಟದ ಹಿರಿಯರ ಕ್ರೀಡಾಕೂಟ
ಪುತ್ತೂರು: ದ.ಕ. ಜಿಲ್ಲಾ ಕ್ರೀಡಾಕೂಟ ಸಂಘಟನಾ ಸಮಿತಿ, ತಾಲೂಕು ಹಿರಿಯರ ಕ್ರೀಡಾ ಸಂಘ ಕಾಣಿಯೂರು ಇದರ ವತಿಯಿಂದ ದ.ಕ ಮತ್ತು ಉಡುಪಿ ಜಿಲ್ಲಾ ಹಿರಿಯರ ಕ್ರೀಡಾ ಸಂಘ, ವಿಷನ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಆಶ್ರಯದಲ್ಲಿ 9ನೇ ದ.ಕ ಮತ್ತು ಉಡುಪಿ ಜಿಲ್ಲಾ ಹಿರಿಯರ ಕ್ರೀಡಾಕೂಟ- 2013ನ್ನು ನ.24 ರಂದು ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ ಸತೀಶ್ ರೈ ನಡುಬೈಲು ತಿಳಿಸಿದ್ದಾರೆ.
ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರೀಡಾಕೂಟವನ್ನು ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಂತ ಫಿಲೋಮಿನಾ ವಿದ್ಯಾ ಸಂಸ್ಥೆಗಳ ಸಂಚಾಲಕ ಫಾ. ಜೆರಾಲ್ಡ್ ಡಿಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕ್ರೀಡಾಕೂಟದಲ್ಲಿ ಅವಿಭಜಿತ ದ.ಕ ಜಿಲ್ಲೆಯ ಸುಮಾರು 400 ಮಂದಿ ಕ್ರೀಡಾಳುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಸ್ಪರ್ಧಾಳುಗಳು ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದು, ಫೆಬ್ರವರಿ ತಿಂಗಳಲ್ಲಿ ಮಂಗಳೂರಿಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಹಿರಿಯರ ಕ್ರೀಡಾಸಂಘದ ಅಧ್ಯಕ್ಷ ಕೆ. ಕುಶಾಲಪ್ಪ ಗೌಡ, ಕಾರ್ಯದರ್ಶಿ ಗಿರಿಶಂಕರ ಸುಲಾಯ, ಜಿಲ್ಲಾ ಹಿರಿಯರ ಕ್ರೀಡಾ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.
ಕಟೀಲು ಹಣ್ಣುಕಾಯಿ ಅವ್ಯವಹಾರ: ಇಬ್ಬರು ಸಿಬ್ಬಂದಿ ಅಮಾನತು
ಮಂಗಳೂರು: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಉಗ್ರಾಣ ಉಸ್ತುವಾರಿ ಜಗದೀಶ ರಾವ್ ಮತ್ತು ಹಣ್ಣುಕಾಯಿ ಅಂಗಡಿಯ ಗುರುರಾಜ್ ಅಮಾನತು ಗೊಳಿಸಿ ಆದೇಶಿಸಿದ್ದಾರೆ.
ರಶೀದಿ ನೀಡದೆ ಹಣ್ಣುಕಾಯಿ ನೀಡಿದ್ದು, 5 ಲಕ್ಷ ಅವ್ಯವಹಾರ ಅಂದಾಜಿಸಲಾಗಿದೆ. ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವರಿಗೆ ಅಮಾನತು ಮುಂದುವರಿಯಲಿದೆ. ಅವ್ಯವಹಾರಕ್ಕೆ ಸಂಬಂಧಿಸಿ ನಾಲ್ವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.