ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರತ್ನಗಳ ಆಗರವಾಗಿತ್ತೇ ರತ್ನಾಪುರ?

Lingaraj Badiger
Updated On : 21 Nov 2013, 12:18 pm

ಸುಬ್ರಹ್ಮಣ್ಯ: ಬಾಳುಗೋಡು ಗ್ರಾಮದ ಕಿರಿಭಾಗ ರಕ್ಷಿತಾರಣ್ಯದ ರತ್ನಾಪುರ ಎಂಬಲ್ಲಿ ನಿಧಿ ತೆಗೆಯಲು ಹಸುಕೂಸನ್ನು ನರಬಲಿ ಕೊಡಲಾಗಿದೆ ಎಂಬ ಶಂಕೆ ಇದೀಗ ವ್ಯಾಪಕವಾಗಿದ್ದು, ರತ್ನಾಪುರದಲ್ಲಿ ನಿಧಿ ಇದ್ದ ಬಗ್ಗೆ ಹಾಗೂ ಇಲ್ಲಿನ ಸ್ಥಳದ ಬಗ್ಗೆ ಕೆಲವೊಂದು ಕತೆಗಳು ಈ ಭಾಗದಲ್ಲಿ ಪ್ರಚಲಿತದಲ್ಲಿವೆ.
ರಾಜವೈಢೂರ್ಯದ ಖನಿ: ಒಂದು ಮೂಲದ ಪ್ರಕಾರ, 1300 ಇತಿಹಾಸವಿರುವ ಇಲ್ಲಿ ಹಿಂದೆ ಬಲ್ಲಾಳರ ಆಳ್ವಿಕೆ ಇತ್ತೆಂದು ಹೇಳಲಾಗುತ್ತದೆ. ರತ್ನಾಪುರದಲ್ಲಿ ಸಿದ್ದರಾಜು ಎನ್ನುವ ರಾಜ ಈ ಪ್ರದೇಶದ ಆಳ್ವಿಕೆ ನಡೆಸುತಿದ್ದ, ಈ ಅರಸನಿಗೆ ರತ್ನಾವತಿ ಎಂಬ ಹೆಸರಿನ ರಾಣಿ ಇದ್ದಳು.
  ಒಂದು ದಿನ ರಾಣಿ ರತ್ನಾವತಿ ನಿತ್ಯ ಪೂಜಾ ವಿಧಿ ವಿಧಾನಗಳ ಬಳಿಕ ಅರಸನ ಬಳಿ ಹೋದಾಗ ಆತ ಕಾಣದೆ ಆಸ್ಥಾನದ ಮಂತ್ರಿಯಲ್ಲಿವಿಚಾರಿಸುತ್ತಾಳೆ. ಅರಸ ತನ್ನ ಆಡಳಿತಕ್ಕೆ ಒಳಪಟ್ಟ ಸೂಳೆಗಳ ಆವಾಸಸ್ಥಾನ ಎನ್ನಲಾದ ಸೂಳೆಕೇರಿಗೆ ಮೋಜಿಗಾಗಿ ತೆರಳಿದ ವಿಚಾರ ಕೇಳಿ ದುಃಖಿಸುತ್ತಾಳೆ. ಬಳಿಕ ಎಲ್ಲವನ್ನೂ ತ್ಯಜಿಸಿ, ರಾಜ ಮನೆಯಲ್ಲಿ ಪೂಜಿಸುತಿದ್ದ ಬಗೆಬಗೆಯ ಆರಾಧ್ಯಮೂರ್ತಿ, ಅಲ್ಲಿನ ಅಮೂಲ್ಯ ಚರ ವಸ್ತುಗಳನ್ನು ಎದುರು ಇರುವ ಕೆರೆಗೆ ಹಾಕಿ ಅದೇ ಕೆರೆಗೆ ಆಕೆಯೂ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಕಾಲಾನುಕ್ರಮೇಣ ಆ ಸಾನಿಧ್ಯ ಅವಸಾನವಾಯಿತು ಎಂಬುದು ಕೆಲವರ ಆಂಬೋಣ.
ದುರ್ಗೆಯ ನೆಲೆ: ಇನ್ನೊಂದು ಕತೆ ಹೀಗಿದೆ. ದುರ್ಗಾದೇವಿ ನೆಲೆಸಿದ್ದ ರತ್ನಾಪುರದ ಮಣ್ಣಿನಡಿ ಹೇರಳ ಸಂಪತ್ತು ಇತ್ತು. ದುಷ್ಟಶಕ್ತಿಗಳು ಆ ಸಂಪತ್ತಿಗೆ ಮುಗಿಬಿದ್ದುದರಿಂದ ಬೇಸತ್ತ ದೇವಿ ದುರ್ಗೆ ತನ್ನ ಮೂಲ ನೆಲೆ ಪರಿತ್ಯಜಿಸಿ, ರತ್ನಾಪುರದಿಂದ ಹರಿದು ಬರುವ ನದಿಯಲ್ಲೇ ನಡೆದು ನೆಲೆ ಅರಸುತ್ತಾ ಕಲ್ಲಾಜೆ ನದಿ ತೀರದಲ್ಲಿ ತೀರ್ಥ ಸದೃಶವಾದ ಗಯದಲ್ಲಿ ನೆಲೆಸಿದಳೆಂದೂ, ಅಲ್ಲೇ ತಪಸ್ಸು ಮಾಡುತ್ತಿದ್ದ ಮಾರ್ಕಂಡೇಯ ಮುನಿಗೆ ಅಶರೀರವಾಣಿಯಾಗಿ, ಆತನು ವಿಷ್ಣು ಸಾನಿಧ್ಯದೊಂದಿಗೆ ಶ್ರೀದೇವಿಯನ್ನು ಪ್ರತಿಷ್ಠಾಪಿಸಿದನೆಂದು ಪ್ರತೀತಿ. ಆಗ್ನೇಯ ದಿಕ್ಕಿನಲ್ಲಿನಲ್ಲಿರುವ ರತ್ನಾಪುರದಿಂದ ಆಗಮಿಸಿ, ದೇವಿಯು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಪಶ್ಚಿಮಾಭಿಮುಖವಾಗಿ ನೆಲೆಸಿರುವ ಸ್ಥಳವೇ ಮರಕತ ಶ್ರೀದುರ್ಗಾಪರಮೇಶ್ವರಿ ದೇವಾಲಯವಾಗಿದೆ. ಈ ದೇವಳದ ಮೂಲ ರತ್ನಾಪುರ.
   ಈ ಕತೆಯು ಮರಕತ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಇದೇ ಸ್ಥಳದ ಮೂಲವಾದ ರತ್ನಾಪುರದಲ್ಲಿ ಇದೀಗ ವಾಮಚಾರ ನಡೆಸಿ ನರಬಲಿ ನೀಡಿ ನಿಧಿ ಅಪಹರಿಸಿದ್ದಾರೆ ಎನ್ನಲಾಗುತ್ತಿದ್ದು, ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.
ರಾಜಾಡಳಿತದ ಕುರುಹುಗಳಿವೆ: ವಿವಿಧ ಕತೆ, ನಂಬಿಕೆಗಳ ಆವಾಸಸ್ಥಾನವಾಗಿರುವ ರತ್ನಾಪುರ ಎಂಬ ಸ್ಥಳದಲ್ಲಿ ಕೆರೆ, ಬಾವಿ, ತುಳಸಿಕಟ್ಟೆಗಳಿದ್ದ ನಿದರ್ಶನಗಳು ಕಂಡುಬರುತ್ತಿವೆ. ಹಿಂದೊಂದು ಕಾಲದಲ್ಲಿ ಇಲ್ಲಿ ರಾಜಾಡಳಿತ, ದೇವಿ ಸಾನಿಧ್ಯ ಇತ್ತು ಎಂದಾದರೆ ಇದೇ ಸ್ಥಳದಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ವಸ್ತುಗಳು ಇರುವ ಸಾಧ್ಯತೆ ಖಂಡಿತ ಇದೆ. ಹಾಗಾಗಿ ಇದನ್ನು ಹೊರತೆಗೆಯಲು ನರಬಲಿ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಗ್ರಾಮಸ್ಥರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement