ರೈಲು ಡಿಕ್ಕಿಯಾಗಿ ಮಹಿಳೆ ಸಾವು
ಮಂಗಳೂರು: ಕೊಲ್ಯ ಬಳಿ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ಸೋಮೇಶ್ವರ ದ್ವಾರಕನಗರ ಜಯಂತಿ ಪ್ರಭು (62) ಮೃತಪಟ್ಟಿದ್ದಾರೆ. ಬೆಳಗ್ಗೆ 9 ಗಂಟೆಗೆ ಅಂಗಡಿಯಿಂದ ಪಡಿತರ ಅಕ್ಕಿ ತೆಗೆದುಕೊಂಡು ಮನೆಗೆ ಹೋಗುವಾಗ ಹಳಿ ದಾಟುತ್ತಿದ್ದರು. ಇದೇ ವೇಳೆಗೆ ರೈಲು ಡಿಕ್ಕಿಯಾಗಿ ಮೃತಪಟ್ಟರು.
ಬೈಕ್-ಬೈಕ್ ಡಿಕ್ಕಿ: ಸಾವು
ಮಂಗಳೂರು: ಮೇಸ್ತ್ರಿ ಕೆಲಸ ಮಾಡುತ್ತಿದ್ದ ನೀರುಮಾರ್ಗ ಚಂದ್ರಹಾಸ (22 ) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬುಧವಾರ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಇನ್ನೊಂದು ಬೈಕ್ ಡಿಕ್ಕಿ ಹೊಡೆಯಿತು. ಕೆಳಕ್ಕೆ ಬಿದ್ದ ಚಂದ್ರಹಾಸ ಗಂಭೀರ ಗಾಯಗೊಂಡು ಮೃತಪಟ್ಟರು.
ಕುಂದಾಪುರ: ವ್ಯಕ್ತಿ ನಾಪತ್ತೆ
ಕುಂದಾಪುರ: ಹೊನ್ನಾವರಕ್ಕೆ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಕುಂದಾಪುರ ನಿವಾಸಿ ವಿಘ್ನೇಶ. ಅವರು ಕುಂದಾಪುರ ಆಸುಪಾಸಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಕೆಲಸದ ವಿಷಯವಾಗಿ ಹೊನ್ನಾವರಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದರು. ಆದರೆ ಇದುವರೆಗೆ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
--