ಇಂದು ಗ್ರಾ.ಪಂ. ಪ್ರತಿನಿಧಿಗಳ ಜಿಲ್ಲಾ ಸಮಾವೇಶ
ಮಂಗಳೂರು: ಮಂಗಳೂರು ತಾಲೂಕು ಗ್ರಾಮ ಪಂಚಾಯ್ತಿಗಳ ಒಕ್ಕೂಟ ವತಿಯಿಂದ ನ. 23 ರಂದು ಬೆಳಗ್ಗೆ 10.30ಕ್ಕೆ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಜಿಲ್ಲಾ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳ 'ಜಿಲ್ಲಾ ಸಮಾವೇಶ' ನಡೆಯಲಿದೆ.
ಗ್ರಾ.ಪಂ.ಗಳ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಮತ್ತು ಪರಿಹಾರಕ್ಕಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನವನ್ನು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಉದ್ಘಾಟಿಸುವರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸುವರು. ಆರೋಗ್ಯ ಸಚಿವ ಯು.ಟಿ. ಖಾದರ್, ಯುವಜನ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್, ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ್, ಶಾಸಕರಾದ ವಸಂತ ಬಂಗೇರ, ಅಂಗಾರ, ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೋ, ಮೈದಿನ್ ಬಾವ ಪಾಲ್ಗೊಳ್ಳುವರು ಎಂದು ಒಕ್ಕೂಟ ಅಧ್ಯಕ್ಷ ಹಮೀದ್ ಕಿನ್ಯಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತುಳಸಿ ಮದ್ದಿನೇನಿ ಅವರ ಅಧ್ಯಕ್ಷತೆಯಲ್ಲಿ 'ಗ್ರಾಮ ಪಂಚಾಯ್ತಿಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಯಶಸ್ಸಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ' ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ.
ಒಕ್ಕೂಟದ ಖಜಾಂಚಿ ಸಿರಾಜ್ ಬಜ್ಪೆ, ಪ್ರಧಾನ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ಹರೇಕಳ, ಸದಸ್ಯ ಇಸ್ಮಾಯಿಲ್ ದೊಡ್ಡಮನೆ ಇದ್ದರು.