ಉಪ್ಪಿನಂಗಡಿ ದೇಗುಲ ಆವರಣದಿಂದ ಖಾಸಗಿ ಭೂಮಿಗೆ ರಸ್ತೆ; ತಹಸೀಲ್ದಾರ್ ಸ್ಥಳ ಪರಿಶೀಲನೆ
ಉಪ್ಪಿನಂಗಡಿ: ಇಲ್ಲಿನ ಸಹಸ್ರಲಿಂಗೇಶ್ವರ ದೇವಾಲಯದ ಆವರಣದಿಂದ ಖಾಸಗಿ ಭೂಮಿಗೆ ಹೆಚ್ಚುವರಿ ಸಂಪರ್ಕ ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ದಂಡಾಧಿಕಾರಿ ಕುಳ್ಳೇಗೌಡ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಕಂದಾಯ ಇಲಾಖಾಧಿಕಾರಿಗಳೊಂದಿಗೆ ಆಗಮಿಸಿದ ದಂಡಾಧಿಕಾರಿ ದೇವಾಲಯದ ಪರಿಸರದಲ್ಲಿ ಪರಿಶೀಲನೆ ನಡೆಸಿ, ಅಪೇಕ್ಷಿತ ದಾರಿಯ ಅವಶ್ಯಕತೆ- ಅನಾವಶ್ಯಕತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ದೂರುದಾರರ ಪೈಕಿ ಇಬ್ಬರಿಗೂ ಸ್ಥಳದಲ್ಲಿ ಹಾಜರಿರಲು ಸೂಚನೆ ನೀಡಲಾಗಿತ್ತು ಎನ್ನಲಾಗಿದೆ.
ದೂರುದಾರರ ಖಾಸಗಿ ಭೂಮಿಗೆ ಈಗಾಗಲೇ ಇರುವ ಸಂಪರ್ಕ ರಸ್ತೆ ದೇವಳದ ಭೂಮಿಯ ಮಧ್ಯೆ ಇದ್ದರೂ, ಅವರ ಭೂಮಿಗೆ ಹೆಚ್ಚುವರಿ ಸಂಪರ್ಕ ರಸ್ತೆಯನ್ನು ದೇವಳದ ಆವರಣದಿಂದಲೇ ಆಪೇಕ್ಷಿಸುತ್ತಿರುವುದು ಯಾಕೆ ಎಂಬುದು ನಿಗೂಢವಾಗಿದೆ ಎಂದು ದೇವಳದ ಆಡಳಿತ ಮಂಡಳಿಯವರು ಹೇಳಿದರು.
ಎಲ್ಲ ಮಾಹಿತಿಗ ದಾಖಲಿಸಿದ ಕುಳ್ಳೇ ಗೌಡ, ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.
ಉಪ ತಹಸೀಲ್ದಾರ್ ಕೃಷ್ಣ ನಾಯ್ಕ್, ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಕರಣಿಕ ಪೂವಪ್ಪ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಭಜನಾ ಮಂಡಳಿಯ ಜಗದೀಶ್ ಶೆಟ್ಟಿ, ಯತೀಶ್ ಶೆಟ್ಟಿ ಇದ್ದರು.
ದಾಂದಲೆ ಪ್ರಕರಣ ತನಿಖೆ: ದೇವಾಲಯದ ಆವರಣದಿಂದ ಉಭಯ ಖಾಸಗಿ ಭೂಮಿಗೆ ಹೆಚ್ಚುವರಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಅನ್ಯ ಮತೀಯ ದುಷ್ಕರ್ಮಿಗಳ ತಂಡ ದೇವಾಲಯದ ಆವರಣದೊಳಗೆ ಬಂದು ದಾಂದಲೆ ನಡೆಸಿದ್ದಲ್ಲದೆ ದೇವಾಲಯದ ಆಡಳಿತ ಮಂಡಳಿಯನ್ನು ಅವಾಚ್ಯ ಶಬ್ದಗಳಿಂದ ಅವಹೇಳನ ಮಾಡಿರುವ ಕೃತ್ಯವನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ದೇವಳದ ಭಕ್ತರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಲಿಖಿತ ದೂರಿಗೆ ಸಂಬಂಧಿಸಿ, ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.