ಎರಡು ವಾರದೊಳಗೆ ಬುಲ್ಟ್ರಾಲ್ ಮೀನುಗಾರಿಕೆ ನಿಷೇಧ: ಅಭಯಚಂದ್ರ ಜೈನ್
ಕುಂದಾಪುರ: ಉಡುಪಿ ಮತ್ತು ದ.ಕ. ಜಿಲ್ಲಾ ಮೀನುಗಾರರಿಗೆ ತೀವ್ರ ಆತಂಕ ಮತ್ತು ಭಾರಿ ವಿರೋಧಕ್ಕೆ ಕಾರಣವಾಗಿದ್ದ ಬುಲ್ಟ್ರಾಲ್ ಮೀನುಗಾರಿಕೆಯನ್ನು ಇನ್ನೆರಡು ವಾರಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಘೋಷಿಸಿದ್ದಾರೆ.
ಶುಕ್ರವಾರ ಇಲ್ಲಿನ ಬೈಂದೂರು ವಿಧಾನಸಭಾ ಕ್ಷೇತ್ರದ ಶಿರೂರು ಗ್ರಾಮದ ಅಳಿವೆಗದ್ದೆ ಎಂಬಲ್ಲಿ ರು. 9.80 ಕೋಟಿ ವೆಚ್ಚದ ಮಿನಿ ಬಂದರು ಮತ್ತು ಸಮುದ್ರ ತೀರದಲ್ಲಿ ಗೈಡ್ವಾಲ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಭಟನೆ ಹಿನ್ನೆಲೆ: ಎರಡು ಬೃಹತ್ ಬೋಟುಗಳ ನಡುವೆ ಬಲೆ ಕಟ್ಟಿ ಸಮುದ್ರ ತೀರದಿಂದ 12 ಕಿ.ಮೀ. ವ್ಯಾಪ್ತಿಯೊಳಗೆ ಎಲ್ಲಾ ರೀತಿಯ ಮೀನುಗಳನ್ನು ಹಿಡಿಯುತ್ತಿದ್ದ ಬುಲ್ಟ್ರಾಲ್ ಮೀನುಗಾರಿಕೆಯಿಂದ ಇತರ ಮೀನುಗಾರರಿಗೆ ನಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಅದನ್ನು ನಿಷೇಧಿಸಬೇಕು ಎಂದು ಮೀನುಗಾರರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬುಲ್ಟ್ರಾಲ್ ಮೀನುಗಾರಿಕೆಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಇದಕ್ಕೆ 15 ದಿನದಲ್ಲಿ ಸಂಪುಟದ ಒಪ್ಪಿಗೆ ಪಡೆಯಲಾಗುವುದು ಎಂದು ಅವರು ಹೇಳಿದರು.
ಕುಂದಾಪುರದ ಕೊಡೇರಿ ಬಂದರಿನ 2ನೇ ಹಂತದ ವಿಸ್ತರಣೆಗೆ ರು. 33 ಕೋಟಿ ಯೋಜನೆ ಮತ್ತು ಮೀನುಗಾರಿಕಾ ರಸ್ತೆಗಳ ದುರಸ್ತಿಗೆ ರು. 60 ಕೋಟಿಗಳ ಯೋಜನೆ ಸಿದ್ಧವಾಗಿದ್ದು ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಮತ್ತು ಮೀನು, ಬಂದರು ಇಲಾಖೆಯ ಅಧಿಕಾರಿಗಳು ಇದ್ದರು.