ಕೊಲೆ ಪ್ರಕರಣವೆಂದು ದಾಖಲಾದ ದೂರು 'ಅಪಘಾತ'ವೆಂದು ಬದಲಾವಣೆ!
ಬೆಳ್ತಂಗಡಿ: ಕೊಯ್ಯೂರಿನಲ್ಲಿ ನ. 20 ರಂದು ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತ ಹಾಗೂ ಬಳಿಕ ದಾಖಲಾದ ಕೊಲೆ ಪ್ರಕರಣದಲ್ಲಿ ಹೊಸ ತಿರುವುಗಳು ಕಾಣಿಸಿಕೊಂಡಿವೆ.
ಆರಂಭದಲ್ಲಿ ಇದೊಂದು ಉದ್ದೇಶಪೂರ್ವಕ ಕೊಲೆ ಪ್ರಕರಣ ಎಂದು ಬೈಕ್ ಸವಾರ ಮೃತ ದಿನೇಶ್ ಗೌಡನ ಚಿಕ್ಕಪ್ಪ ಸಿದ್ಧಪ್ಪ ಗೌಡ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಸಾರ್ವಜನಿಕರ ಪ್ರತಿಭಟನೆಗಳ ನಡುವೆ ಕಾರು ಚಾಲಕ ಬಾಲಕೃಷ್ಣ ಪೂಜಾರಿ ವಿರುದ್ಧ ಭಾರತೀಯ ದಂಡ ಸಂಹಿತೆ 302 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಬಾಲಕೃಷ್ಣ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಇದರ ನಡುವೆ ನ.21 ರಂದು ಮೃತ ಯುವಕನ ತಂದೆ ಬಾಬಿ ಗೌಡ ಹಾಗೂ ದೂರುದಾರ ಸಿದ್ಧಪ್ಪ ಗೌಡ ಅವರು ಬೆಳ್ತಂಗಡಿ ಠಾಣೆಗೆ ನೀಡಿದ್ದರೆನ್ನಲಾದ ಮಾಹಿತಿಯನ್ವಯ ಬೆಳ್ತಂಗಡಿ ಪೊಲೀಸರು ಇವರಿಬ್ಬರನ್ನು ಇಲ್ಲಿನ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಅವರು ಹಿಂದಿನ ದಿನ ನೀಡಿದ್ದ ದೂರು ಸರಿಯಾಗಿಲ್ಲ. ಇದು ಕೊಲೆ ಪ್ರಕರಣ ಅಲ್ಲ. ಇದೊಂದು ಅಪಘಾತವಷ್ಟೇ ಎಂದು ಹೇಳಿದ್ದಲ್ಲದೆ ಹಿಂದೆ ನೀಡಿದ ದೂರನ್ನು ಹಿಂತೆಗೆದುಕೊಳ್ಳುವುದಾಗಿ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪ್ರಕರಣದ ಪರಿಶೀಲನೆ ನಡೆಸಿದ್ದಾರೆ. ಆದರೆ, ಈ ಬಗ್ಗೆ ಅಂತಿಮ ತೀರ್ಪಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬಾಲಕೃಷ್ಣ ಪೂಜಾರಿಯನ್ನು ಬೆಳ್ತಂಗಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕೊಲೆ ಪ್ರಕರಣವೆಂದು ನೀಡಿದ್ದ ದೂರನ್ನು ಒಂದೇ ದಿನದಲ್ಲಿ ಬದಲಿಸಿ ಅಪಘಾತವೆಂದು ಹೇಳಿಕೆ ನೀಡಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.