'ಜನರಿಗೆ ಪ್ರಾಣ ರಕ್ಷಣೆಯ ಭರವಸೆ ಬೇಕಿದೆ'
ಪುತ್ತೂರು: ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆದ ಬಳಿಕ ಸರ್ಕಾರ ಸಿಬಿಐಗೆ ಒಪ್ಪಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೇಲೆ ನಂಬಿಕೆಯಿರುವ ಕಾರಣ ನಾವು ಸಿಬಿಐ ತನಿಖೆ ನಂಬುತ್ತೇವೆ. ಆದರೆ ಜನರಿಗೆ ಪ್ರಾಣ ರಕ್ಷಣೆಯ ಭರವಸೆ ಬೇಕಾಗಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ ಆರೋಪಿಸಿದ್ದಾರೆ.
ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯಾ ಪ್ರಕರಣದ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆಸಿದ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಹೋರಾಟಗಾರರ ಮೇಲೆ ಮಾನನಷ್ಟ ಹಾಕುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ರಾಜಕೀಯ ಮುಖಂಡರಿಂದ ನಡೆಯುತ್ತಿದೆ. ಆದರೆ ನಮ್ಮ ಹೋರಾಟ ನಿಲ್ಲದು ಎಂದರು. ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಮುಖಂಡ ಸುನಿಲ್ ಕುಮಾರ್ ಬಜಾಲ್ ಮತ್ತು ತಾಲೂಕು ಕಾರ್ಯದರ್ಶಿ ಪಿ.ಕೆ. ಸತೀಶನ್ ಇದ್ದರು.