ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದಿರಾ ಆವಾಸ್‌ನಲ್ಲೂ 'ಅಹಿಂದ' ಮಂತ್ರ!

Mainashree
Updated On : 25 Nov 2013, 10:33 am

ಮಂಗಳೂರು: ಶಾದಿ ಭಾಗ್ಯ, ಅಹಿಂದ ಮಕ್ಕಳಿಗೆ ಪ್ರವಾಸ ಯೋಗ ಕರುಣಿಸಿ ವಿವಾದಕ್ಕೆ ಗುರಿಯಾದ ರಾಜ್ಯ ಸರ್ಕಾರ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
 ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ)ವರ್ಗವನ್ನು ಓಲೈಸಲು ಇಂದಿರಾ ಆವಾಸ್ ಯೋಜನೆಯಲ್ಲಿ ಫಲಾನುಭವಿಗಳು ಇಲ್ಲದಿದ್ದರೂ ಅಧಿಕ ಗುರಿ ನಿಗದಿಪಡಿಸಿ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ಸುತ್ತೋಲೆ ಹೊರಡಿಸಿದೆ.
ಈ ಮಾನದಂಡ ಪ್ರಕಾರ ನಿಗದಿತ ವರ್ಗವೊಂದರಲ್ಲಿ (ಉದಾ-ಎಸ್‌ಸಿ) ಸಾಕಷ್ಟು ಫಲಾನುಭವಿಗಳು ಇಲ್ಲದ ಪಕ್ಷದಲ್ಲಿ ಯೋಜನೆಯ ಪ್ರಯೋಜನವನ್ನು ಇನ್ನೊಂದು ವರ್ಗದ ಮಂದಿಗೆ (ಉದಾ-ಎಸ್‌ಟಿ) ವರ್ಗಾಯಿಸಲು ಸಾಧ್ಯವಿಲ್ಲ.
ಇದೇ ನಿಯಮ ಇರಿಸಿ ಮನೆ ಹಂಚಲು ಹೊರಟರೆ ಯಾರಿಗೂ ಸರಿಯಾಗಿ ಮನೆ ಸಿಗದು. ಅಲ್ಲದೆ ಸರ್ಕಾರದ ಉದ್ದೇಶಿತ ಯೋಜನೆ ಗುರಿ ತಲುಪಲು ಸಾಧ್ಯವಾಗದು.
ಈ ಕ್ರಮ ಜಾರಿಗೊಳಿಸಿರುವ ವಸತಿ ನಿಗಮ ಈಗ ಸ್ಥಳೀಯ ಸಂಸ್ಥೆಗಳ ವಿರೋಧ ಎದುರಿಸಬೇಕಾಗಿದೆ.
ಹಿಂದಿನ ಕ್ರಮವನ್ನು ಕೈಬಿಟ್ಟು ಆಯಾ ವರ್ಗಕ್ಕೆ ಅಧಿಕ ಗುರಿ ನಿಗದಿಪಡಿಸಿರುವುದರಿಂದ ಫಲಾನುಭವಿಗಳು ಇಲ್ಲದ ಕಡೆ ಯೋಜನೆ ಗುರಿ ಸಾಧಿಸಲು ವಿಫಲವಾಗಿ ಅಧಿಕಾರಿಗಳು ಇಕ್ಕಟ್ಟಿನ ಪರಿಸ್ಥಿತಿ ಅನುಭವಿಸಬೇಕಾಗಿದೆ.
ಕಳೆದ ವರ್ಷ ವರೆಗೆ  ಬಸವ ವಸತಿ ಯೋಜನೆ ಮಾದರಿಯಲ್ಲಿ ಇಂದಿರಾ ಆವಾಸ್‌ನಲ್ಲೂ ಫಲಾನುಭವಿಗಳ ಆಯ್ಕೆ ಮಾಡಬೇಕಿತ್ತು.
ಆದರೆ ಈ ಸಾಲಿನಲ್ಲಿ ಎರಡನೇ ಹಂತದ ಹೆಚ್ಚುವರಿ ಗುರಿ ನಿಗದಿಪಡಿಸಿ ಹೊರಡಿಸಿದ ಆದೇಶದಲ್ಲಿ ಸರ್ಕಾರದ ಹಕೀಕತ್ತು ಬಯಲಾಗಿದೆ.
ಈ ಬಾರಿ ಇಂದಿರಾ ಆವಾಸ್‌ನಲ್ಲಿ ರಾಜ್ಯದ ಒಟ್ಟು ಗುರಿ 18382. ಪರಿಶಿಷ್ಟ ಜಾತಿಗೆ 8754, ಪರಿಶಿಷ್ಟ ಪಂಗಡ 5475, ಅಲ್ಪಸಂಖ್ಯಾತರಿಗೆ 2936 ಹಾಗೂ ಸಾಮಾನ್ಯ ವರ್ಗಕ್ಕೆ 1217 ಮನೆ ನಿಗದಿಪಡಿಸಲಾಗಿದೆ. ಕಳೆದ ವರ್ಷ ಶೇ.15 ಇದ್ದ ಗುರಿ ಈ ವರ್ಷ ಶೇ.50ಕ್ಕೆ ನೆಗೆದಿದೆ.
ಮಾನದಂಡ ಸರಿಯಿಲ್ಲ: 2011 ಜನಗಣತಿ ಆಧಾರದಲ್ಲಿ ವಸತಿ ನಿಗಮ ಜಿಲ್ಲಾವಾರು ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳ ಗುರಿ ನಿಗದಿಪಡಿಸಿದೆ.
 ಜಿಲ್ಲೆಯಲ್ಲಿ ಅಹಿಂದ ವರ್ಗ ಅಧಿಕ ಸಂಖ್ಯೆಯಲ್ಲಿದ್ದರೂ ಗ್ರಾಮ ಪಂಚಾಯ್ತಿವಾರು ಪರಿಗಣಿಸುವಾಗ ಇದು ಸರಿಯಾಗಿಲ್ಲ. ಯಾಕೆಂದರೆ ಕೆಲವು ಗ್ರಾಮದಲ್ಲಿ ನಿರ್ದಿಷ್ಟ ವರ್ಗಗಳು ಇಲ್ಲ. ಹಾಗಾಗಿ ಈ ಮಾನದಂಡವನ್ನು ಇಡೀ ಗ್ರಾಮ ಪಂಚಾಯ್ತಿಗೆ ಅನ್ವಯಿಸಿರುವುದು ಅವೈಜ್ಞಾನಿಕ, ಅಸಮರ್ಥ ಎನ್ನುವುದು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಅಳಲು.
ಒಂದು ವೇಳೆ ಗುರಿಗೆ ಅನುಗುಣವಾಗಿ ಫಲಾನುಭವಿ ಇಲ್ಲದಿದ್ದರೆ ಗುರಿಯನ್ನು ನಿಗಮಕ್ಕೆ ವಾಪಾಸ್ ಮಾಡಬೇಕು. ಅಥವಾ ಯೋಜನೆ ಅವಶ್ಯಕತೆ ಇರುವ ಬೇರೆ ಗ್ರಾಮ ಪಂಚಾಯ್ತಿಗಳಿಗೆ ವರ್ಗಾವಣೆ ಮಾಡಲು ಪ್ರಸ್ತಾವನೆ ಸಲ್ಲಿಸಬಹುದು.
ಅಥವಾ ಅದೇ ಜಿಲ್ಲೆಯ ಬೇಡಿಕೆ ಇರುವ ಗ್ರಾಮ ಪಂಚಾಯ್ತಿಗಳಿಗೆ ಆಯಾ ವರ್ಗದ ಮನೆಗಳ ಗುರಿ ವರ್ಗಾವಣೆ ಮಾಡಬಹುದು. ಆದರೆ ಎಸ್‌ಸಿಗೆ ನಿಗದಿಪಡಿಸಿದ ಗುರಿಯನ್ನು ಎಸ್‌ಟಿಗೆ, ಎಸ್‌ಟಿಗೆ ನಿಗದಿಯಾದ್ದನ್ನು ಎಸ್‌ಸಿಗೆ ಅಥವಾ ಬೇರೆ ವರ್ಗಕ್ಕೆ ಬದಲಾಯಿಸಲು ಅವಕಾಶವಿಲ್ಲ.
ಫಲಾನುಭವಿ ಇಲ್ಲದಿದ್ದರೂ ಗುರಿ ಇದೆ!: ವಸತಿ ನಿಗಮ ಎಡವಿದ್ದೇ ಇಲ್ಲಿ, ಜಿಲ್ಲೆಗಳಲ್ಲಿ ನಿರ್ದಿಷ್ಟ ವರ್ಗದವರು ಅಧಿಕ ಸಂಖ್ಯೆಯಲ್ಲಿ ಇರಬಹುದು. ಆದರೆ ಗ್ರಾಮವಾರು ವಾಸ್ತವ ಸ್ಥಿತಿ ಹಾಗಿಲ್ಲ.
 ಕೆಲವು ಗ್ರಾಮಗಳಲ್ಲಿ ನಿರ್ದಿಷ್ಟ ವರ್ಗದ ಫಲಾನುಭವಿಗಳೇ ಇಲ್ಲ. ಈ ಮೊದಲು ಬೇರೆ ವರ್ಗಕ್ಕೆ ಸುಲಭದಲ್ಲಿ ಗುರಿ ವರ್ಗಾಯಿಸಿ, ಯೋಜನೆ ಕಾರ್ಯಗತಗೊಳಿಸಲಾಗುತ್ತಿತ್ತು. ಈಗ ಪಂಚಾಯ್ತಿಗೆ ಬಂದ ಗುರಿಯನ್ನು ಫಲಾನುಭವಿ ಇಲ್ಲ ಎಂಬ ಒಂದೇ ಕಾರಣಕ್ಕೆ ಕಳೆದುಕೊಳ್ಳಬೇಕಾಗುತ್ತದೆ.
ಈ ವರ್ಷದಿಂದ ಬಸವ ವಸತಿ ಯೋಜನೆಯಂತೆ ಇಂದಿರಾ ಆವಾಸ್‌ನಲ್ಲೂ ಮಂಜೂರಾದ 90 ದಿನದಲ್ಲಿ ಮನೆ ಕೆಲಸ ಪ್ರಾರಂಭಿಸಿ ವೆಬ್‌ಸೈಟ್‌ಗೆ ಕಾಮಗಾರಿ ವಿವರ ಅಪ್‌ಲೋಡ್ ಮಾಡಬೇಕು. ಇಲ್ಲದಿದ್ದರೆ ಮಂಜೂರಾತಿ ಲಾಕ್ ಆಗುತ್ತದೆ. ಸಕಾಲದಲ್ಲಿ ಕಾಮಗಾರಿ ಪ್ರಾರಂಭಿಸದಿದ್ದರೆ ಫಲಾನುಭವಿಗೆ ನಿಗಮದ ನೆರವೂ ಸಿಗುವುದಿಲ್ಲ.

ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement