ಕಟೀಲು ದೇವಿಗೆ ಶಿಲ್ಪಾ ವಿಶೇಷ ಪೂಜೆ
ಮಂಗಳೂರು: ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಊರಿಗೆ ಬಂದರೆ ಕಟೀಲಿಗೆ ಬಂದು ದೇವಿಗೆ ಪೂಜೆ ಮಾಡಿಯೇ ಹೋಗುತ್ತಾರೆ. ಶಿಲ್ಪಾ ಶೆಟ್ಟಿ ಭಾನುವಾರ ಮಧ್ಯಾಹ್ನ ತಂದೆ ಸುರೇಂದ್ರ ಶೆಟ್ಟಿ ಜತೆ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಅರ್ಚಕ ಅನಂತ ಆಸ್ರಣ್ಣ ದೇವಿ ಪ್ರಸಾದವಾಗಿ ರೇಷ್ಮೆ ಸೇರಿ ನೀಡಿದರು.
ದೇವರ ದರ್ಶನ ಬಳಿಕ ಮಾತನಾಡಿದ ಶಿಲ್ಪಾ ಶೆಟ್ಟಿ, ತನ್ನ ಯಶಸ್ಸಿಗೆ ದುರ್ಗಾಪರಮೇಶ್ವರಿ ಕಾರಣವಾಗಿದ್ದು, ಇದಕ್ಕೆ ಧನ್ಯವಾದ ಅರ್ಪಿಸಲು ದೇವರ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸಿದರು. ಪತಿ ರಾಜ್ ಕುಂದ್ರಾ ಮತ್ತು ಮಗು ಮಂಗಳೂರಿಗೆ ಬಂದಿದ್ದರೂ ಮಾಧ್ಯಮದಿಂದ ದೂರ ಉಳಿದರು.
ಕಟೀಲು ಸಮೀಪದ ಮುದಲಾಡಿಗುತ್ತು ಮನೆತನದ ಶಿಲ್ಪಾ ಶೆಟ್ಟಿ ಬಿಗ್ಬ್ರದರ್ ಮೂಲಕ ವಿಶ್ವವಿಖ್ಯಾತರಾಗಿದ್ದರು. ಪ್ರತಿ ಬಾರಿಯೂ ಮಂಗಳೂರಿಗೆ ಬಂದಾಗ ಮಾತೃಭಾಷೆ ತುಳುವಿನಲ್ಲಿಯೇ ಮಾತನಾಡಿ ಇಲ್ಲಿನ ಜನರ ಮನಗೆಲ್ಲುವುದು ವಿಶೇಷ.