ಪುತ್ತೂರಲ್ಲಿ 'ವರ್ಷ ಸಂಭ್ರಮ-9'
ಪುತ್ತೂರು: ಶಾಸ್ತ್ರೀಯ ಕಲೆಗಳು ಸಮಾಜದ ಸಂಸ್ಕೃತಿಯ ಅಂಗವಾಗಿದ್ದು, ಅವನ್ನು ಇನ್ನಷ್ಟು ಪೋಷಿಸಬೇಕಾದ ಅಗತ್ಯವಿದೆ ಎಂದು ವಿವೇಕಾನಂದ ಬಿ.ಎಡ್.ಕಾಲೇಜು ಉಪನ್ಯಾಸಕಿ ವಿದುಷಿ ಡಾ.ಶೋಭಿತ ಸತೀಶ್ ಅಭಿಪ್ರಾಯಪಟ್ಟರು.
ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ ಆಶ್ರಯದಲ್ಲಿ ಶನಿವಾರ ಇಲ್ಲಿನ ಪುರಭವನದಲ್ಲಿ ನಡೆದ 'ವರ್ಷ ಸಂಭ್ರಮ-9' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಕಲೆಯಲ್ಲಿ ತೊಡಗಿಸಿಕೊಂಡರೆ ಎಳವೆಯಲ್ಲೇ ಸಂಸ್ಕಾರ ಪಡೆಯಲು ಸಾಧ್ಯ. ಅಲ್ಲದೆ ಸಾಂಸ್ಕೃತಿಕ ಪುನರುಜ್ಜೀವನಕ್ಕೂ ಇದು ಕಾರಣವಾಗಲಿದೆ. ಈ ಕಲಾಕೇಂದ್ರದ ಸಾಧನೆ ಇನ್ನಷ್ಟು ಪ್ರಗತಿ ಕಾಣಲಿ ಎಂದು ಹಾರೈಸಿದರು.
ಈ ಸಂದರ್ಭ ಕಲಾಕೇಂದ್ರದಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಲಾಕೇಂದ್ರ ನಿರ್ದೇಶಕ ಮಂಜುನಾಥ ಪಿ.ಎಸ್. ಪ್ರಾಸ್ತಾವಿಕ ಮಾತನಾಡಿದರು. ನೃತ್ಯಗುರು ವಿದುಷಿ ಶಾಲಿನಿ ಪಿ.ಎಸ್ ವಂದಿಸಿದರು. ಉಪನ್ಯಾಸಕ ವಿಶ್ವನಾಥ ರೈ ನಿರೂಪಿಸಿದರು.
ಬಳಿಕ ಕಲಾಕೇಂದ್ರ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ನಟುವಾಂಗದಲ್ಲಿ ವಿದುಷಿ ಶಾಲಿನಿ ಪಿ.ಎಸ್, ಹಾಡುಗಾರಿಕೆ ವಸಂತ ಕುಮಾರ ಗೋಸಾಡ, ಮೃದಂಗದಲ್ಲಿ ವಿದ್ವಾನ್ ಮನೋಹರ ರಾವ್ ಮಂಗಳೂರು, ವಯಲಿನ್ನಲ್ಲಿ ವಿದ್ವಾನ್ ಬಾಲರಾಜ್ ಕಾಸರಗೋಡು ಸಹಕರಿಸಿದರು.