ಮಂಗಳೂರಲ್ಲಿ ಆನ್‌ಟೈಮ್ ಮನಿ ಎಕ್ಸ್‌ಚೇಂಜ್ ಶಾಖೆ: ಖುಮೇರಿ
ಮೂಲ್ಕಿ: ಕರಾವಳಿ ಪ್ರದೇಶವು ಉತ್ತಮ ಪ್ರಕೃತಿ ಸಂಪತ್ತನ್ನು ಹೊಂದಿದ್ದು ದುಬೈನಲ್ಲಿ ಇಲ್ಲಿನ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ತಮ್ಮ ಆನ್ ಟೈಮ್ ಮನಿ ಎಕ್ಸ್‌ಚೇಂಜ್ ಶಾಖೆಯನ್ನು ಮಂಗಳೂರನ್ನು ಕೇಂದ್ರವನ್ನಾಗಿಟ್ಟುಕೊಂಡು ವಿಸ್ತರಿಸಲು ನಿರ್ಧರಿಸಿರುವುದಾಗಿ ದುಬೈನ ಆನ್ ಟೈಮ್ ಮನಿ ಎಕ್ಸ್‌ಚೇಂಜ್‌ನ ಅಧ್ಯಕ್ಷ, ಉದ್ಯಮಿ ಮುಹಮ್ಮದ್ ಬಿನ್ ರಿದಾ ಗುಲಾಂ ಆಲಿ ಖುಮೇರಿ ಹೇಳಿದ್ದಾರೆ.
ಮೂಲ್ಕಿಯ ಗೇರುಕಟ್ಟೆಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಲ್ಲಿನ ಯುವಕರಿಗೆ ಉದ್ಯೋಗವನ್ನು ದೊರಕಿಸುವ ನಿಟ್ಟಿನಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶಯದಂತೆ ತಮ್ಮ ಉದ್ಯಮದ ಶಾಖೆಯನ್ನು ಕರಾವಳಿ ಪ್ರದೇಶದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಸ್ವಾಮೀಜಿ ಆಧ್ಯಾತ್ಮಿಕ ಹಾಗೂ ವಾಸ್ತು ಬಗ್ಗೆ ಹೆಚ್ಚಿನ ಅನುಭವ ಹೊಂದಿದ್ದು ಅವರ ಅನುಭವವನ್ನು ಪಡೆಯಲು ಆಗಮಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ನಮ್ಮ ದೇಶದ ಸಂಪತ್ತಾಗಿರುವ ಆಧ್ಯಾತ್ಮಿಕದತ್ತ ವಿದೇಶಿಯರು ಆಕರ್ಷಿತರಾಗುತ್ತಿದ್ದು ಜ್ಯೋತಿಷ್ಯ ಮತ್ತು ವಿಜ್ಞಾನವು ಒಂದಕ್ಕೊಂದು ಸಂಬಂಧ ಹೊಂದಿದ್ದು ಜ್ಯೋತಿಷ್ಯದಿಂದ ಭವಿಷ್ಯ ಹಾಗೂ ಪ್ರಕೃತಿಯ ಆಗು ಹೋಗುಗಳ ಬಗ್ಗೆ ತಿಳಿಯಲು ಸಾಧ್ಯ ಎಂದರು.
ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ಸಂಚಾಲಕ ಮಧು ಆಚಾರ್ಯ, ಗಿರೀಶ್ ಕಾಮತ್ ಇದ್ದರು.