ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು
ವಿಟ್ಲ: ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಡ್ಕಿದು ಗ್ರಾಮದ ಅಳಕೆಮಜಲು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ವಿಟ್ಲ ಪೊಲೀಸ್ ಸ್ಟೇಷನ್ನ ನಿವೃತ್ತ ಹೆಡ್ ಕಾನ್ಸ್ಟೇಬಲ್ ವೆಂಕಟಕೃಷ್ಣ ಭಟ್ ಅವರ ಪುತ್ರ ರಾಘವೇಂದ್ರ ಭಟ್(35) ಎಂಬವರೇ ಮೃತಪಟ್ಟವರು. ಈತ ಭಾನುವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ. ರಾಘವೇಂದ್ರ ಅವರು ಕಬಕದಿಂದ ತನ್ನ ಆಟೋ ರಿಕ್ಷಾದಲ್ಲಿ ಅಳಕೆಮಜಲಿಗೆ ಬಂದಿದ್ದು, ಈ ಸಂದರ್ಭ ಅವರು ವಿಪರೀತ ಮದ್ಯ ಸೇವಿಸಿದ್ದರು. ಅವರಿಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಆಟೋ ಚಾಲಕ ಚಂದ್ರಶೇಖರ ಎಂಬವರು ತಿಳಿಸಿದ್ದಾರೆ.
ಈತ ಮನೆಯಿಂದ ಹೊರ ಬಂದು ಆವರಣಗೋಡೆಯಿಲ್ಲದ ಬಾವಿ ಬಳಿ ಮೂತ್ರ ಶಂಕೆಗೆಂದು ನಿಂತಿದ್ದಾಗ ನಿಯಂತ್ರಣ ತಪ್ಪಿ ಬಿದ್ದು ಮೇಲಕ್ಕೇಳಲಾಗದೇ ಅಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ವಿಟ್ಲ ಪೊಲೀಸರು ಹಾಗೂ ಪುತ್ತೂರು ಅಗ್ನಿಶಾಮಕ ದಳದವರು ಬಂದು ಮೃತದೇಹವನ್ನು ಮೇಲೆತ್ತಿದ್ದಾರೆ. ಶವದ ಕಿಸೆಯಲ್ಲಿ ಗಾಂಜಾವೂ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವೆಂಕಟಕೃಷ್ಣ ಭಟ್ ಕುಟುಂಬ ಮೂಲತಃ ಸುಬ್ರಹ್ಮಣ್ಯದ ಒಂಟೆಗುಂಡಿಯವರು. ವೆಂಕಟಕೃಷ್ಣ ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಸಂದರ್ಭ ಅಳಕೆಮಜಲಿನಲ್ಲಿ ಜಮೀನು ಖರೀದಿಸಿದ್ದರು. ಅವರ ಮೂಲ ಜಾಗ ಸುಬ್ರಹ್ಮಣ್ಯದಲ್ಲಿದ್ದುದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ ಆ ಜಮೀನು ಪಾಳು ಬಿದ್ದಿತ್ತು. ಬಳಿಕ ಅವರು ಅಳಕೆಮಜಲಿನ ಜಮೀನನ್ನು ಅಭಿವೃದ್ಧಿಪಡಿಸುವ ಮೂಲಕ ಇಲ್ಲೇ ವಾಸವಾಗಿದ್ದರು.
ರಾಘವೇಂದ್ರ ಅವರು ಬಾವಿಗೆ ಬಿದ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಎಲ್ಲರಿಗೆ ಮಾಹಿತಿ ನೀಡಿ ಒಟ್ಟು ಸೇರಿ ಹಗ್ಗವನ್ನಿಳಿಸಲು ತೊಡಗಿದರು. ಈ ಸಂದರ್ಭದಲ್ಲಿ ಅವನ ತಂದೆ ಅದೆಲ್ಲ ಬೇಡ. ಆತನನ್ನು ಮೇಲಕ್ಕೆತ್ತುವಾಗ ನಿಮಗೆ ಅಪಾಯ ಸಂಭವಿಸಬಹುದು. ಬಾವಿಗೆ ಆವರಣಗೋಡೆಯೂ ಇಲ್ಲವಾದುದರಿಂದ ವ್ಯರ್ಥ ಪ್ರಯತ್ನವನ್ನು ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದರು.
ಕೊಲೆ ಆರೋಪ: ಮನೆಯವರು ಪುತ್ರ ಬಾವಿಗೆ ಬಿದ್ದರೂ ಆತನನ್ನು ಬದುಕಿಸುವ ಪ್ರಯತ್ನವನ್ನೂ ಮಾಡುವುದಕ್ಕೆ ಬಿಡಲಿಲ್ಲ. ಇದು ಕೊಲೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಇದರ ಪರಿಣಾಮ ಸ್ಥಳದಲ್ಲಿ ಸುದ್ದಿ ಹರಡಿ ಮತ್ತಷ್ಟು ಜನ ಸೇರುವಂತಾಗಿದೆ. ಪೊಲೀಸರು ತಕ್ಷಣ ವೆಂಕಟಕೃಷ್ಣ ಮತ್ತು ಇನ್ನೊಬ್ಬ ಪುತ್ರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಅವರು ಮಾತನಾಡಿ ಕೊಲೆ ಆರೋಪದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಅಥವಾ ಈ ಬಗ್ಗೆ ವಿವರ ನೀಡುವುದು ಸಾಧ್ಯವಿಲ್ಲ ಈ ಬಗ್ಗೆ ತನಿಖೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.