ನರ್ಸ್‌ಗಳಿಬ್ಬರ ಮೇಲೆ ಹಲ್ಲೆ: ದೂರು ದಾಖಲು
ಮಂಗಳೂರು: ಇಲ್ಲಿನ ಖಾಸಗಿ ಆಸ್ಪತ್ರೆಯ ಎಂಡಿಯೊಬ್ಬರು ಇಬ್ಬರು ನರ್ಸ್‌ಗಳಾದ ಪ್ರೀತಿ ಮತ್ತು ಗೀತಾ ಎಂಬವರ (ಹೆಸರು ಬದಲಿಸಲಾಗಿದೆ) ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಆಸ್ಪತ್ರೆಯ ಎಂಡಿ ಅವರ ಮಾವ ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಬೆನ್ನು ಹುರಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದು, ಸದಾ ಆ ವಾರ್ಡ್‌ನಲ್ಲಿ ಹೋಗುವ ನರ್ಸ್‌ಗಳ ವಿರುದ್ಧ ದೂರು ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನರ್ಸ್‌ಗಳು ಅವರ ವಾರ್ಡ್‌ಗೆ ಹೋಗಲು ಹಿಂದೇಟು ಹಾಕುತ್ತಿದ್ದರು.
ಈ ವಾರ್ಡ್‌ಗೆ ಸೋಮವಾರ ಹೋಗಬೇಕಿದ್ದ ನರ್ಸ್ ರಜೆ ಹಾಕಿದ್ದರಿಂದ ಬದಲಿಗೆ ಪ್ರೀತಿ ಎಂಬ ನರ್ಸ್‌ನ್ನು ತೆರಳುವಂತೆ ಉಸ್ತುವಾರಿ ಧರ್ಮರಾಜ್ ಸೂಚಿಸಿದ್ದರು. ಇದಕ್ಕೆ ಪ್ರೀತಿ ಒಪ್ಪಲಿಲ್ಲ. ಹೀಗಾಗಿ ಬದಲಿಗೆ ಇನ್ನೊಬ್ಬ ನರ್ಸ್ ಗೀತಾಳನ್ನು ಕಳುಹಿಸಿದರು. ಆದರೆ, ಕರೆದಾಗ ನರ್ಸ್ ಬರಲಿಲ್ಲ ಎಂಬ ಕಾರಣಕ್ಕೆ ರೋಗಿ ಎಂಡಿಗೆ ದೂರು ನೀಡಿದರು. ಆಗ ವಿಚಾರಣೆ ನಡೆಸಿದ ಎಂಡಿ ಎಲ್ಲರೆದುರೇ ಪ್ರೀತಿ ಮತ್ತು ಗೀತಾಳಿಗೆ ಕೆನ್ನೆಗೆ ಬಾರಿಸಿದರು. ಕೂಡಲೇ ಪ್ರೀತಿ ಕೆಲಸ ಬಿಡುವುದಾಗಿ ಹೇಳಿ, ಆಸ್ಪತ್ರೆಯಲ್ಲಿ ಯೂನಿಫಾರ್ಮ್ ತೆಗೆದಿರಿಸಿ, ಕದ್ರಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ತನ್ನ ಅವಶ್ಯಕ ಸಾಮಗ್ರಿಗಳು ಆಸ್ಪತ್ರೆಯಲ್ಲಿದ್ದು, ಅದನ್ನು ತರಲು ಆಸ್ಪತ್ರೆಗೆ ಹೋಗಲು ಭಯವಾಗುತ್ತಿದೆ. ಹೀಗಾಗಿ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಕೇಸನ್ನು ಹಿಂಪಡೆಯುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಕದ್ರಿ ಪೊಲೀಸರು ಕೇಸು ದಾಖಲಿಸಿದ್ದಾರೆ.