ಪಾವೂರು: ನಾಪತ್ತೆಯಾದ ಯುವಜೋಡಿ ಮೃತದೇಹಗಳು ನೇತ್ರಾವತಿ ನದಿಯಲ್ಲಿ ಪತ್ತೆ
ಬಂಟ್ವಾಳ: ಶನಿವಾರದಿಂದ ನಾಪತ್ತೆಯಾಗಿದ್ದ ತಾಲೂಕಿನ ಯುವ ಜೋಡಿಯ ಮೃತದೇಹ ಪಾವೂರು ಗ್ರಾಮದ ನೇತ್ರಾವತಿ ನದಿಕಿನಾರೆಯಲ್ಲಿ ಸೋಮವಾರ ಪತ್ತೆಯಾಗಿದೆ.
ದೇವಸ್ಯಮುಡೂರು ಗ್ರಾಮದ ಸುಬ್ಬ ಎಂಬವರ ಪುತ್ರ ಶಿವರಾಜ್ (18) ಹಾಗೂ ಪಂಜಿಕಲ್ಲು ಗ್ರಾಮದ ಕೇಲ್ದೋಡಿ ನಿವಾಸಿ ಕೃಷ್ಣಮೂಲ್ಯ ಎಂಬವರ ಪುತ್ರಿ ಸುಮಿತ್ರ (19) ಮೃತರು. ಬಿ.ಸಿ.ರೋಡಿನ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಕೆಲಸಕ್ಕಿದ್ದ ಶಿವರಾಜ್ ಕಳೆದ ಶನಿವಾರ ಬಿ.ಸಿ.ರೋಡಿಗೆಂದು ಮನೆಯಿಂದ ಬಂದಾತ ವಾಪಾಸು ಬಾರದೆ ನಾಪತ್ತೆಯಾಗಿದ್ದ. ಇಲ್ಲಿನ ವಕೀಲೆಯೊಬ್ಬರ ಕಚೇರಿಯಲ್ಲಿ ಸಹಾಯಕಿಯಾಗಿದ್ದ ಸುಮಿತ್ರ ಶನಿವಾರ ಬೆಳಗ್ಗೆ ತನ್ನ ಕಚೇರಿಗೆ ಬಂದಾಕೆ, ಪಕ್ಕದ ಬ್ಯಾಂಕ್ನಲ್ಲಿ ಕಚೇರಿ ಕೀ ನೀಡಿ ತೆರಳಿದ್ದವಳು ನಾಪತ್ತೆಯಾಗಿದ್ದಳು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ಎರಡು ಪ್ರತ್ಯೇಕ ದೂರು ದಾಖಲಾಗಿದ್ದವು. ಈರ್ವರ ಮೃತದೇಹ ಸೋಮವಾರ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಗಾಡಿಕಟ್ಟೆಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಇವರಿಬ್ಬರ ನಡುವೆ ಕಳೆದ ಹಲವು ಸಮಯಗಳಿಂದ ಪ್ರೇಮವಿದ್ದು, ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಕೊಣಾಜೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.