ಮತ್ತೆ ಠುಸ್ಸೆಂದ 'ಪಡೀಲ್-ಬಜಾಲ್ ಕೆಳಸೇತುವೆ' ಯೋಜನೆ
ಮಂಗಳೂರು: ಪಡೀಲ್-ಬಜಾಲ್ ರೈಲ್ವೆ ಕೆಳಸೇತುವೆಯ ಕಾಮಗಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇನ್ನೇನು ಕಾಮಗಾರಿಗೆ ಶಿಲಾನ್ಯಾಸ ಮಾಡಲು ತಯಾರಾಗಿರುವ ಸಂದರ್ಭದಲ್ಲಿ, ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆಯಿಂದ ಕೆಳಸೇತುವೆ ನಿರ್ಮಾಣ ಸೂಕ್ತವಲ್ಲ ಎಂಬ ನೋಟಿಸ್ ನೀಡಿದೆ.
ಸೋಮವಾರ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಕದ್ರಿ ಸರ್ಕ್ಯೂಟ್ ಹೌಸ್ನಲ್ಲಿ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕುಂದು ಕೊರತೆಗಳ ಸಭೆ ನಡೆಯಿತು.
ಬಜಾಲ್ ಬಳಿಯಲ್ಲಿ ರೈಲ್ವೆ ಮತ್ತು ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಸುಮಾರು ರು. 4.96 ಕೋಟಿ ವೆಚ್ಚದಲ್ಲಿ ಬಾಕ್ಸ್ ಫಿಕ್ಸಿಂಗ್ ಮೂಲಕ ಕೆಳಸೇತುವೆ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಇದನ್ನು ಪರಿಶೀಲಿಸಿದ ರೈಲ್ವೆ ಸುರಕ್ಷತಾ ಇಲಾಖೆ ಈ ಕಾಮಗಾರಿ ಪ್ರಯಾಣಿಕರ ಸುರಕ್ಷತೆಯಿಂದ ಇದನ್ನು ತಿರಸ್ಕರಿಸಿದೆ ಎಂದು ಹೇಳಿದರು.
ರೈಲ್ವೆ ಹೋರಾಟಗಾರರ ಬಹುದಿನದ ಬೇಡಿಕೆಯಲ್ಲಿ ಒಂದಾದ ಬಜಾಲ್-ಪಡೀಲ್ ಕೆಳಸೇತುವೆ ನಿರ್ಮಾಣವು ಸ್ಥಗಿತಗೊಳ್ಳಲು ಬಿಡೆವು. ಈ ಕುರಿತು ನ. 29 ರಂದು ಬೆಳಗ್ಗೆ 11ಕ್ಕೆ ಚೆನ್ನೈನಲ್ಲಿ ನಡೆಯುವ ಸಭೆಯಲ್ಲಿ ಕಾಮಗಾರಿ ಮುಂದುವರೆಸುವಂತೆ ಒತ್ತಾಯಿಸಲಾಗುವುದು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಜಪ್ಪು ಕುಡ್ಪಾಡಿ ಕೆಳಸೇತುವೆ ನಿರ್ಮಾಣ ಕಾಮಗಾರಿಯ ಸರ್ವೇ ಕಾರ್ಯವನ್ನು ರೈಟ್ಸ್ ಸಂಸ್ಥೆಗೆ ವಹಿಸಿದೆ. ಇದಕ್ಕೆ ರು. 3.6 ಕೋಟಿ ವೆಚ್ಚವಾಗಲಿದ್ದು, ಪಾಲಿಕೆಯಲ್ಲಿ ಅಷ್ಟೊಂದು ಮೊತ್ತ ಇಲ್ಲದ ಕಾರಣ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪಾಲಿಕೆ ಅಧಿಕಾರಿ ಹೇಳಿದರು.
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಲು ತೀರ್ಮಾನಿಸಿದ್ದು, ಇದರ ಸರ್ವೇ ಕಾರ್ಯವನ್ನು ಕಿಡ್ಕೋ ಸಂಸ್ಥೆ ವಹಿಸಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಬೈಕಂಪಾಡಿ ರೈಲ್ವೆ ಸೇತುವೆ ನಿರ್ಮಾಣ ಕಾರ್ಯ ಮೇ 14 ರಂದು ಪೂರ್ಣಗೊಳ್ಳಲಿದೆ ಎಂದು ಸಂಸದರು ಹೇಳಿದರು.
ಪುತ್ತೂರು ಆದರ್ಶ ರೈಲ್ವೆ ನಿಲ್ದಾಣ ಕಾಮಗಾರಿಯ 2 ಹಂತ ಮುಗಿದಿದೆ. ಪಾರ್ಕಿಂಗ್ಗಾಗಿ ಜಾಗ ಮೀಸಲಿರಿಸಿದ್ದು, ಪುರಸಭೆ ಇದರ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿದೆ.
ನೇರಳಕಟ್ಟೆ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ 12 ಗ್ರಾಮಗಳ ಸುಮಾರು 4 ಸಾವಿರ ಪ್ರಯಾಣಿಕರಿದ್ದು ಮಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ನೇರಳಕಟ್ಟೆ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲನ್ನು ನಿಲುಗಡೆಗೊಳಿಸಬೇಕು ಎಂದು ನಾಗರಿಕರು ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ರೈಲ್ವೆ ಇಲಾಖೆ ಪ್ಯಾಸೆಂಜರ್ ರೈಲನ್ನು 2 ತಿಂಗಳ ಕಾಲ ಪ್ರಾಯೋಗಿಕವಾಗಿ ನಿಲ್ಲಿಸಲಾಗುತ್ತದೆ. ಆದಾಯವಿದ್ದರೆ ಮುಂದುವರಿಸಲಾಗುವುದು ಎಂದು ಹೇಳಿದರು.
ಕೆಲ ದಿನಗಳ ಹಿಂದೆ ಅಡ್ಯಾರ್ನಲ್ಲಿ ಸಂಭವಿಸಿದ ಟೆಂಪೋ ಅಪಾಘಾತ ಜಾಗದಲ್ಲಿ ರೈಲ್ವೆ ಕೆಳಸೇತುವೆ ಕಾಮಗಾರಿಗೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಸುಮಾರು ರು. 92 ಲಕ್ಷ ವೆಚ್ಚವಾಗಲಿದೆ. ಇದಕ್ಕೆ ಸಂಸದರ ನಿಧಿಯಿಂದ ರು. 10 ಲಕ್ಷ ನೀಡುವುದಾಗಿ, ಉಳಿದ ಮೊತ್ತ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ನೀಡುವಂತೆ ಸೂಚಿಸಿದರು.
ನಾಗುರಿ-ಕಂಕನಾಡಿ ರಸ್ತೆ ಅಗಲೀಕರಣ ಕಾಮಗಾರಿಗೆ ಸರ್ವೇ ಕಾರ್ಯ ನಡೆದಿದೆ. ಜಾಗ ಒತ್ತುವರಿ ಸ್ಥಳದಲ್ಲಿ ಕಾಮಗಾರಿ ಪ್ರಾರಂಭಸಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ಅಧಿಕಾರಿ ಹೇಳಿದರು.
ಕಾರವಾರ-ಬೆಂಗಳೂರು ರೈಲನ್ನು ಅರಸೀಕೆರೆಯಲ್ಲಿ 1 ಗಂಟೆ ನಿಲ್ಲಿಸಲಾಗುತ್ತದೆ. ಇದರಿಂದ ಪ್ರತಿನಿತ್ಯ ಮಂಗಳೂರಿನ ಜನತೆ ತಡವಾಗಿ ಬೆಂಗಳೂರು ತಲುಪುವಂತಾಗಿದೆ. ಆದ್ದರಿಂದ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕರೊಬ್ಬರು ಸಂಸದರಲ್ಲಿ ತಿಳಿಸಿದರು.
ಸಭೆಯಲ್ಲಿ ಪಾಲ್ಘಾಟ್ ರೈಲ್ವೆ ವಿಭಾಗದ ಪಿಯುಷ್ ಅಗರ್ವಾಲ್, ಕೊಂಕಣ್ ರೈಲ್ವೆ ವಿಭಾಗದ ವಿನಯ್ ಕುಮಾರ್, ಮೈಸೂರು ರೈಲ್ವೆ ವಿಭಾಗದ ಕೆ. ಅನಿಲ್ ಕುಮಾರ್, ಪಿ. ಮೋಹನನ್, ರಾಷ್ಟ್ರೀಯ ಹೆದ್ದಾರಿ ಪ್ರೊಜೆಕ್ಟ್ ಡೈರೆಕ್ಟರ್ ಶ್ರೀರಾಮ್ ಮಿಶ್ರಾ ಇದ್ದರು.