ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸದಸ್ಯನಿಂದಲೇ ಪುರಸಭೆ ವಿರುದ್ಧ ಧರಣಿ

Mainashree
Updated On : 26 Nov 2013, 10:34 am

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಸಮಸ್ಯೆಯೊಂದನ್ನು ಮುಂದಿಟ್ಟುಕೊಂಡು ಪುರಸಭಾ ಸದಸ್ಯರೊಬ್ಬರು ಪುರಸಭಾ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತ ಘಟನೆ ಬಂಟ್ವಾಳ ಪುರಸಭೆಯಲ್ಲಿ ಸೋಮವಾರ ನಡೆದಿದೆ.  
ವಾರ್ಡ್ ನಂ.4 ರ ಸದಸ್ಯ ದೇವದಾಸ್ ಶೆಟ್ಟಿ ಎಂಬವರೇ ಧರಣಿ ಕುಳಿತು ಪುರಸಭಾ ನಿರ್ಲಕ್ಷ್ಯದ ವಿರುದ್ಧ ಗಮನ ಸೆಳೆದವರು. ಇಲ್ಲಿನ ಕೊಟ್ರಮಣಗಂಡಿ ಎಂಬಲ್ಲಿ ನಿರ್ಮಿಸಲಾದ ಬಸ್ ತಂಗುದಾಣದ ಪಕ್ಕದಲ್ಲಿ ನೀರು ಹರಿಯುವ ತೋಡಿಗೆ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಸೇತುವೆ ನಿರ್ಮಿಸಿ ಖಾಸಗಿ ಜಮೀನಿಗೆ ಮಣ್ಣು ಸಾಗಿಸುತ್ತಿರುವುದನ್ನು ಆಕ್ಷೇಪಿಸಿ ಧರಣಿ ನಡೆಸಿದ್ದಾರೆ.
ಕೊಟ್ರಮಣಗಂಡಿಯಲ್ಲಿ ಪುರಸಭೆಯ ವತಿಯಿಂದ ಈಗಾಗಲೇ ಬಸ್ ತಂಗುದಾಣವನ್ನು ನಿರ್ಮಿಸಲಾಗಿದ್ದು, ಇದರ ಪಕ್ಕದಲ್ಲಿ ನೀರು ಹರಿಯುವ ತೋಡೊಂದಿದ್ದು, ಇದಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಸೇತುವೆಯನ್ನು ನಿರ್ಮಿಸಿ ಇದರ ಮೂಲಕ ತನ್ನ ಜಮೀನಿಗೆ ಕಳೆದ ಕೆಲವು ದಿನಗಳಿಂದ ಮಣ್ಣು ಸಾಗಿಸುತ್ತಿದ್ದರು. ಈ ಬಗ್ಗೆ ಇದೇ ವಾರ್ಡ್‌ನ ಸದಸ್ಯ ದೇವದಾಸ ಶೆಟ್ಟಿಯವರು ಪುರಸಭಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಪುರಸಭೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಬಳಿಕ ಅವರು ಈ ಬಗ್ಗೆ ಲಿಖಿತವಾಗಿ ದೂರು ಕೊಟ್ಟಿದ್ದರೂ ಪುರಸಭಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿದ್ದರು. ಪುರಸಭೆಯ ಈ ಧೋರಣೆಯಿಂದ ಅಸಮಧಾನಗೊಂಡ ಸದಸ್ಯ ದೇವದಾಸ ಶೆಟ್ಟಿ ಸೋಮವಾರ ಬೆಳಗ್ಗೆ ಹಠಾತನೇ ಏಕಾಂಗಿಯಾಗಿ ಕಚೇರಿಯ ಮುಂಭಾಗದ ಜಗಲಿಯಲ್ಲಿ ಧರಣಿ ಕುಳಿತರು.
ಸುದ್ದಿ ತಿಳಿದ ಪುರಸಭೆಯ ಹಿರಿಯ ಸದಸ್ಯರಾದ ಗೋವಿಂದ ಪ್ರಭು, ಭಾಸ್ಕರ ಟೈಲರ್, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದ, ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್, ಉಪಾಧ್ಯಕ್ಷ ಪುರುಷ ಸಾಲ್ಯಾನ್, ಮಾಜಿ ಪುರಸಭಾಧ್ಯಕ್ಷ ದಿನೇಶ್ ಭಂಡಾರಿ, ಮಾಜಿ ಸದಸ್ಯ ಸುರೇಶ್ ಕುಲಾಲ್ ಮೊದಲಾದವರು ದೇವದಾಸ್ ಶೆಟ್ಟಿಯವರ ಧರಣಿಗೆ ಸಾಥ್ ನೀಡಿದರು.
ಈ ಮಧ್ಯೆ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಸದಸ್ಯ ಮಹಮ್ಮದ್ ನಂದರಬೆಟ್ಟು ಧರಣಿ ಕುಳಿತ ದೇವದಾಸ ಶೆಟ್ಟಿಯವರನ್ನು ಮನವೊಲಿಸಲು ಯತ್ನಿಸಿದರು. ಸುಮಾರು 3 ತಾಸುಗಳ ಕಾಲ ಅವರು ತನ್ನ ಬೇಡಿಕೆ ಈಡೇರಿಕೆಗಾಗಿ ಪುರಸಭಾ ಕಚೇರಿಯ ಜಗಲಿಯಲ್ಲಿ ಧರಣಿ ಕುಳಿತಿದ್ದು, ಮಧ್ಯಾಹ್ನದ ವೇಳೆಗೆ ಪ್ರಭಾರ ಮುಖ್ಯಾಧಿಕಾರಿ ಮತ್ತಾಡಿಯವರು ಇನ್ನು ಮುಂದಕ್ಕೆ ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೆ ಪುರಸಭೆಗೊಳಪಟ್ಟ ಈ ಜಮೀನನ್ನು ಯಾರೂ ಪ್ರವೇಶಿಸದಂತೆ ಕ್ರಮಕೈಗೊಳ್ಳಲಾಗುವುದು ಹಾಗೂ ಇಲ್ಲಿ ಕಾಂಪೌಂಡು ಗೋಡೆ ನಿರ್ಮಿಸಲು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದ ಬಳಿಕ ಸದಸ್ಯ ದೇವದಾಸ ಶೆಟ್ಟಿ ತನ್ನ ಧರಣಿಯನ್ನು ಹಿಂತೆಗೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement