ಸ್ವರ್ಣ ನದಿಗೆ ಮಹಿಳೆಯರ ಗಂಗಾರತಿ
ಉಡುಪಿ: ಉಡುಪಿಯಲ್ಲಿ ಭಾನುವಾರ ಸಂಜೆ ಮೊದಲ ಬಾರಿಗೆ ನಡೆದ ಸುವರ್ಣ ಗಂಗಾರತಿ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಉಡುಪಿಯ ಜನತೆಗೆ ಸಮೃದ್ಧ ಜೀವಜಲವಿತ್ತು ಪೋಷಿಸುತ್ತಿರುವ ಜೀವನದಿ ಸ್ವರ್ಣ (ಸುವರ್ಣ)ಗೆ ನೂರಾರು ಮಹಿಳೆಯರು ದೀಪ ಅರ್ಪಿಸಿ, ಆರತಿ ಬೆಳಗಿ ವಂದನೆಗಳನ್ನು ಸಲ್ಲಿಸಿದರು.
ನದಿ ಕೇಂದ್ರಿತ ಸಾಂಸ್ಕೃತಿಕ ವ್ಯವಸ್ಥೆಗೆ ಮರುಜೀವನ ನೀಡುವ ಮತ್ತು ಊರಿನ ನದಿಯೊಂದಿಗೆ ಜನರ ನಂಟನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಸಂಸ್ಕಾರಭಾರತಿ ಉಡುಪಿ ಘಟಕ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಮಾತೃಮಂಡಳಿ ಕಡಿಯಾಳಿ, ಪೆರಂಪಳ್ಳಿಯ ಸ್ತ್ರೀ ಶಕ್ತಿ ಸಂಘಗಳು, ನವಚೈತನ್ಯ ಯುವಕ ಮಂಡಲ, ಪೆರಂಪಳ್ಳಿ ಯುವಕ ಮಂಡಲ, ಓಂ ಶ್ರೀ ಯುವಕ ಸಂಘ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಂಗಲಿಯರು, ಯುವತಿಯರು ಸ್ವರ್ಣನದಿಗೆ ಅರಶಿನ, ಕುಂಕುಮ, ಹೂ ಮೊದಲಾದ ಮಂಗಲದ್ರವ್ಯ ಸಮರ್ಪಿಸಿ, ಅರಳು ಬೆಲ್ಲ ಅರ್ಪಿಸಿ ನೂರಾರು ದೀಪಗಳನ್ನು ತೇಲಿಬೆಟ್ಟು ಆರತಿ ಬೆಳಗಿದ ದೃಶ್ಯ ನೋಡುಗರ ಮನಸೆಳೆಯಿತು.
ಪೆರಂಪಳ್ಳಿ ಸಮೀಪದ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಇರುವ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಈ ವಿಶಿಷ್ಟ ಹಬ್ಬ ನಡೆಯಿತು.
ಕಾರ್ಯಕ್ರಮವನ್ನು ಸಂಯೋಜಿಸಿದ ಸಂಸ್ಕಾರ ಭಾರತಿ ಸಂಚಾಲಕ ವಾಸುದೇವ ಭಟ್ ಪ್ರಸ್ತಾವನೆಗೈದ ಬಳಿಕ ದೇವಳದ ಅರ್ಚಕ ನವೀನ್ ಶಿವತ್ತಾಯರ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು.
ಮಾತೃಮಂಡಳಿ ಮುಖ್ಯಸ್ಥೆ ಸುಪ್ರಭಾ ಆಚಾರ್ಯ, ಸಾಮಾಜಿಕ ಧುರೀಣಿ ಶ್ಯಾಮಲಾ ಕುಂದರ್, ನಗರಸಭಾ ಸದಸ್ಯರಾದ ಪ್ರಶಾಂತ್ ಭಟ್, ಡಾ.ಎಂ.ಆರ್. ಪೈ, ಎಂಜಿನಿಯರ್ ರಮೇಶ್ ರಾವ್, ಸ್ತ್ರೀಶಕ್ತಿ ಸಂಘದ ಅರುಣಾ, ಕೃಷ್ಣಮೂರ್ತಿ ಶಿವತ್ತಾಯ, ಶಂಕರ್ ಕುಲಾಲ್, ಜಯಕುಮಾರ್, ರಾಘವೇಂದ್ರ ಭಟ್, ವಾಣಿ ಭಟ್, ಮೋಹಿಸಿ ಶಿವತ್ತಾಯ ಇದ್ದರು.