ಉಜಿರೆ ರುಡ್ಸೆಟ್ಗೆ ರಾಷ್ಟ್ರೀಯ ದ್ವಿತೀಯ ಅತ್ಯುತ್ತಮ ಸಂಸ್ಥೆ ಪ್ರಶಸ್ತಿ ಪ್ರದಾನ
ಮಂಗಳೂರು: ಉಜಿರೆ ರುಡ್ಸೆಟ್ ಸಂಸ್ಥೆಗೆ ರಾಷ್ಟ್ರೀಯ ದ್ವಿತೀಯ ಅತ್ಯುತ್ತಮ ಸಂಸ್ಥೆ ಪ್ರಶಸ್ತಿಯನ್ನು ಇತ್ತೀಚೆಗೆ ದೆಹಲಿಯ ವಿದ್ಯಾನ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಪ್ರದಾನ ಮಾಡಿದರು. ಡಾ.ಡಿ. ವೀರೇಂದ್ರ ಹೆಗ್ಗಡೆ ನಾಯಕತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಜಿರೆ ರುಡ್ಸೆಟ್ಗೆ ರಾಷ್ಟ್ರೀಯ ದ್ವಿತೀಯ ಅತ್ಯತ್ತಮ ಸಂಸ್ಥೆ ಪ್ರಶಸ್ತಿಯನ್ನು ಉಜಿರೆಯ ನಿರ್ದೇಶಕ ಹಾಗೂ ಕೆನರಾ ಬ್ಯಾಂಕಿನ ಹಿರಿಯ ಪ್ರಬಂಧಕ ಎಂ.ಕೆ.ಎಸ್. ಪ್ರಭು ಅವರಿಗೆ ಪ್ರದಾನ ಮಾಡಲಾಯಿತು. ರುಡ್ಸೆಟ್ ಸಂಸ್ಥೆಯ ರಾಷ್ಟ್ರೀಯ ಸಲಹಾ ಮಂಡಳಿಯ ಗೌರವ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಇದ್ದರು. ಕೆನರಾ ಬ್ಯಾಂಕಿನ ಅಧ್ಯಕ್ಷ ಆರ್.ಕೆ. ದುಬೆ, ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷ ಸುಧೀರ್ ಕುಮಾರ್ ಜೈನ್, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕಾರ್ಯದರ್ಶಿ ಘೋಯಲ್, ಜಂಟಿ ಕಾರ್ಯದರ್ಶಿ ವಿಜಯ ಕುಮಾರ್, ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್, ರುಡ್ಸೆಟ್ ನ್ಯಾಷನಲ್ ಅಕಾಡಮಿ ನಿಗಾವಣ ಘಟಕದ ಮುಖ್ಯ ಯೋಜನಾ ಸಮನ್ವಯ ಅಧಿಕಾರಿ ಕೆ.ಎನ್. ಜನಾರ್ದನ್, ರುಡ್ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಪಿ. ಜಗದೀಶ್ ಮೂರ್ತಿ ಇದ್ದರು.