ಕಂಚಿ ಮಠಾಧೀಶರು ನಿರ್ದೋಷಿ: ಸತ್ಯಕ್ಕೆ ಸಂದ ಜಯ
ಮಂಗಳೂರು: 'ವಿಶ್ವ ಹಿಂದು ಪರಿಷತ್ ಮಾರ್ಗದರ್ಶಕ ಕಂಚಿ ಮಠಾಧೀಶರ ವಿರುದ್ಧ ತಮಿಳುನಾಡು ಸರ್ಕಾರವು ಹಾಕಿದ್ದ ಕ್ರಿಮಿನಲ್ ದಾವೆಯಲ್ಲಿ ಸ್ವಾಮೀಜಿ ನಿರ್ದೋಷಿ ಎಂದು ಸಾಬೀತಾಗಿದ್ದು, ಸತ್ಯಕ್ಕೆ ಸಂದ ಜಯ' ಎಂದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಹೇಳಿದೆ. ಹಿಂದೂ ಧಾರ್ಮಿಕ ನಾಯಕರ ಮೇಲೆ ವಿನಾಕಾರಣ ಆರೋಪ ಹೊರಿಸಿರುವ ರಾಜ್ಯ ಸರ್ಕಾರಗಳಿಗೆ ಈ ತೀರ್ಪು ಹಿನ್ನಡೆಯಾಗಿದೆ. ಯಾವುದೇ ಪುರಾವೆಗಳಿಲ್ಲದೆ ಸ್ವಾಮೀಜಿಯವರ ಮೇಲೆ ಕೊಲೆ ಆರೋಪ ಹೇರಿ ಅಧಿಕಾರ ದುರುಪಯೋಗ ಪಡಿಸಿದ ಸರ್ಕಾರವು ತನ್ನ ಕ್ರಮವನ್ನು ಇನ್ನಾದರೂ ನಿಲ್ಲಿಸಲಿ ಎಂದು ವಿಹಿಂಪ ಕರ್ನಾಟಕ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಪ್ರಕರಣಗಳು ಮರುಕಳಿಸಿದ್ದಲ್ಲಿ ಇದರ ವಿರುದ್ಧ ಸಂಘಟನೆ ಉಗ್ರ ಹೋರಾಟ ನಡೆಸುತ್ತದೆ ಎಂದು ಬಜರಂಗದಳ ವಿಭಾಗ ಸಂಯೋಜಕ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಮಹಿಳೆ ಸಾವು
ಕುಂದಾಪುರ: ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಲ್ಲಿನ ಆನಗಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮೃತರು ಮೇರಿ ಡಿ' ಸೋಜಾ (88). ಇವರು ಸೋಮವಾರ ತಮ್ಮ ಮನೆಯಲ್ಲಿ ಬಿಸಿ ನೀರಿಗಾಗಿ ಒಲೆಗೆ ಬೆಂಕಿ ಹಚ್ಚುವಾಗ ಆಕಸ್ಮಿಕವಾಗಿ ಮೈಗೆ ಬೆಂಕಿ ತಾಕಿದ್ದು, ಮನೆಯವರು ಕೂಡಲೇ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಈ ಬಗ್ಗೆ ಜೆರಾಲ್ಡ್ ನೆಲ್ಸಾನ್ ಡಿ' ಸೋಜಾ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಮಗುಚಿ ವ್ಯಕ್ತಿ ಸಾವು
ಬೈಂದೂರು: ಲಾರಿ ಮಗುಚಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಲ್ಲಿನ ಪಡುವರಿ ಗ್ರಾಮದ ಚಿಲುಮೆ ಎಂಬಲ್ಲಿ ಬುಧವಾರ ನಡೆದಿದೆ. ಮೃತರು ಸತಾರ. ಲಾರಿ ಚಾಲಕ ಶಿವಲಾಲ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸಿಕೊಂಡು ಹೋಗುವಾಗ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದಿದ್ದೆ. ಪರಿಣಾಮ ಲಾರಿಯಲ್ಲಿದ್ದ ಮೂವರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ಪೈಕಿ ಸತಾರಾ ಎಂಬವರು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.